ಜಿಲ್ಲೆ

ಯಾವುದೇ ಕಾರಣಕ್ಕೂ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ಸಂಬಂಧ ಅಮೆರಿಕ ಜತೆ ಒಪ್ಪಂದ ಬೇಡ

Kolar

ಕೋಲಾರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಯಾವುದೇ ಕಾರಣಕ್ಕೂ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ಸಂಬಂಧ ಒಪ್ಪಂದ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಬಣದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೈನೋದ್ಯಮ ರಾಜ್ಯದ ರೈತರ ಜೀವನಾಡಿಯಾಗಿದೆ, ನೀರು ಮತ್ತು ಮೇಲಿನ ಸಮಸ್ಯೆಯಿದ್ದರೂ ರೈತರು ಹಸುಗಳನ್ನು ಸಾಕಿ ಹಾಲನ್ನು ಡೇರಿಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಭಾರತ ಸರ್ಕಾರ ಅಮೆರಿಕದ ಹಾಲು ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದಲ್ಲಿ ಹಾಲು ಉತ್ಪಾದಕರು ಮತ್ತು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇಶದ ಸುಮಾರು 10 ಕೋಟಿ ರೈತ ಕುಟುಂಬಗಳು ಹೈನೋದ್ಯಮ ಮತ್ತು ಕುಕ್ಕುಟೋದ್ಯಮವನ್ನು ಅವಲಂಬಿಸಿ ಜೀವನ ಸಾಗಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕದೊಂದಿಗೆ ಮುಕ್ತ ಮಾರುಕಟ್ಟೆ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಬಯಸಿರುವುದು ರೈತ ವಿರೋಧಿ ನೀತಿಯಾಗಿದೆಯಲ್ಲದೆ, ಇದರಿಂದ ಕೋಟ್ಯಂತರ ಕುಟುಂಬಗಳ ಮರಣ ಶಾಸನ ಬರೆಯುವಂತಾಗಿದೆ ಎಂದು ಅಭಿಪ್ರಾಯಿಸಿದರು.

ಈ ಹಿಂದೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗಳಿಗೆ ಮಣಿದು ಒಪ್ಪಂದಕ್ಕೆ ಸಹಿ ಹಾಕದೆ ಈಗ ಭಾರತಕ್ಕೆ ಬರುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸುವ ನೆಪದಲ್ಲಿ ಮತ್ತೆ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಹೊರಟಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನಗಳ ಮೇಲಿನ ಅಮದು ಶುಲ್ಕ ಶೇ. 60 ತೆರಿಗೆ ಕಡಿತಗೊಳಿಸಿದರೆ, ಭಾರತದ ಹಾಲಿನ ಆಂತರಿಕ ಮಾರುಕಟ್ಟೆಗೆ ತೀವ್ರ ಹೊಡೆತ ಬೀಳುತ್ತದೆ. ಕುಕ್ಕುಟೋದ್ಯಮವನ್ನು ನಂಬಿರುವ ಸುಮಾರು 48 ದಶಲಕ್ಷ ಜನರ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದರು.

ರೈತರಿದಂದ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಕೊಂಡಪ್ಪ, ಮನವಿಯನ್ನು ಪ್ರಧಾನ ಮಂತ್ರಿಗಳಿಗೆ ಕಳುಹಿಸಿಕೊಡುವುದಾಗಿ ಹೇಳಿದರು.

ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಮುಖಂಡರಾದ ವೆಂಕಟೇಶಪ್ಪ, ನಾಗೇಶ್, ಈಕಂಬಳ್ಳಿ ಮಂಜುನಾಥ, ನಲ್ಲಂಡಹಳ್ಳಿ ಕೇಶವ, ಪುತ್ತೇರಿ ರಾಜು, ಮೀಸೆ ವೆಂಕಟೇಶಪ್ಪ, ಸಹದೇವಣ್ಣ, ಮಾಸ್ತಿ ವೆಂಕಟೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.