ಬೆಂಗಳೂರು: ಮುಜರಾಯಿ ಇಲಾಖೆಯ "ಸಿ'ವರ್ಗದ ದೇವಾಲಯಗಳ ಅಭಿವೃದ್ಧಿಗೆ, ಅರ್ಚಕರ ಕ್ಷೇಮಾಭಿವೃದ್ಧಿಗೆ ಹೆಚ್ಚು ಅನುದಾನವನ್ನು ವೆಚ್ಚ ಮಾಡಲು ಸಾಮಾನ್ಯ ಸಂಗ್ರಹಣಾ ನಿಧಿ ಮೊತ್ತವನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಚಾಮರಾಜಪೇಟೆಯ ಶ್ರೀ ರಾಮೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
ಕಾಯ್ದೆಗೆ ರಾಜ್ಯಪಾಲರ ಅನುಮೋದನೆಯಾಗಬೇಕಿದೆ. ಅನುಮೋದನೆ ಬಳಿಕ ಹೆಚ್ಚಾಗಿ ಸಂಗ್ರಹವಾಗುವ ನಿಧಿಯಲ್ಲಿ ಪ್ರತಿವರ್ಷ 100 ದೇವಾಲಯಗಳಂತೆ "ಸಿ' ವರ್ಗದ ದೇವಾಲಯಗಳ ಜೀಣೋರ್ದ್ಧಾರ, ವಿದ್ಯಾರ್ಥಿ ವೇತನ, ಮರಣ ಉಪದಾನ, ಅರ್ಚಕರಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ವಿನಿಯೋಗಿಸಲಾಗುವುದು. ದೇಗುಲಗಳ ಅಭಿವೃದ್ಧಿಗೆ, ಅರ್ಚಕರ ಕ್ಷೇಮಾಭಿವೃದ್ಧಿಗೆ ನಿಧಿಯನ್ನು ವಿನಿಯೋಗಿಸಲು ಸರ್ಕಾರ ತೀರ್ಮಾನಿಸಿದೆ. ಅರ್ಚಕರ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಸಚಿವರು ಹೇಳಿದರು. ಇದೇ ವೇಳೆ ಅರ್ಚಕರಿಗೆ, ದೇವಾಲಯದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋತ್ಸಾಹ ಧನ, ಮರಣ ಉಪದಾನ ವಿತರಿಸಲಾಯಿತು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಡಾ. ಬಿ.ಎಸ್.ದ್ವಾರಕನಾಥ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಎಂ.ನಾಗರಾಜು, ಮಲ್ಲಿಕಾ ಪ್ರಶಾಂತ ಪಕ್ಕಳ, ವಿನಾಯಕ್ ಮತ್ತಿತರರಿದ್ದರು.
ಯಾತ್ರೆಗಳಿಗೆ ಉತ್ತಮ ಪ್ರತಿಕ್ರಿಯೆ:
ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ನಮ್ಮ ಇಲಾಖೆಗೆ ಸೇರಿದ್ದ 34,564 ದೇವಾಲಯಗಳ ಪೈಕಿ 34,166 "ಸಿ' ವರ್ಗದ ದೇವಾಲಯಗಳಿವೆ. ಭಕ್ತಾಧಿಗಳ ಅನುಕೂಲಕ್ಕಾಗಿ "ಭಾರತ್ ಗೌರವ್' ಯೋಜನೆಯಡಿ "ಕಾಶಿ', "ದಕ್ಷಿಣ ಭಾರತ್' ಮತ್ತು "ದ್ವಾರಕಾ' ಯಾತ್ರೆಗಳು ಯಶಸ್ಸಿಯಾಗಿ ಕೈಗೊಳ್ಳಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಭಕ್ತಾಧಿಗಳ ಬೇಡಿಕೆ ಅನುಸರಿಸಿ ಮತ್ತಷ್ಟು ಕ್ಷೇತ್ರಗಳಿಗೆ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ತಸ್ತೀಕ್, ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಪಾವತಿಸಲು ಆನ್ಲೈನ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನೇರವಾಗಿ ಖಾತೆಗೆ ಹಣ ಹಾಕಲಾಗವುದು ಎಂದು ಹೇಳಿದರು.