ಜಿಲ್ಲೆ

ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ನಿಯಮದಲ್ಲಿ ತಿದ್ದುಪಡಿ

ವೀರೇಶ ಸೌದ್ರಿ

ಗೋಕರ್ಣ: ಉತ್ತಮ ಸೇವೆಗೆ ಹೆಸರಾದ ಮಹಾಬಲೇಶ್ವರ ಸಹಕಾರ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ವರದಿಯ ವರ್ಷದಲ್ಲಿ 117.06 ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ ತಿಳಿಸಿದರು.

ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಉಪನಿಯಮ ತಿದ್ದುಪಡಿಗೆ ನಿರ್ಧರಿಸಿದೆ. ಇದಕ್ಕೆ ಸದಸ್ಯರು ಒಪ್ಪಿಗೆ ನೀಡುವಂತೆ ವಿನಂತಿಸಿದರು.

ಪ್ರಸ್ತುತ ಜಾರಿಯಲ್ಲಿರುವ ಉಪನಿಯಮದ ಪ್ರಕಾರ, ಬ್ಯಾಂಕ್ ಸದಸ್ಯನು 5 ವಾರ್ಷಿಕ ಮಹಾಸಭೆಗಳ ಪೈಕಿ 3 ಸಭೆಗಳಿಗೆ ಹಾಜರಾಗದಿದ್ದಲ್ಲಿ ಅಥವಾ ನಿರಂತರ 3 ಸಹಕಾರ ವರ್ಷಗಳ ವರೆಗೆ ಬ್ಯಾಂಕ್ ಒದಗಿಸುವ ಕನಿಷ್ಠ ಸೇವೆ ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದಲ್ಲಿ ಅಂತಹ ಸದಸ್ಯನು ಸಾಮಾನ್ಯ ಸಭೆಯಲ್ಲಿ ಮತ್ತು ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತ ಚಲಾಯಿಸುವ ಹಕ್ಕು ಹೊಂದಿರತಕ್ಕದ್ದಲ್ಲ. ಈ ಉಪನಿಯಮಕ್ಕೆ ಬದಲಾವಣೆ ತಂದು ಕನಿಷ್ಠ 2 ಮಹಾಸಭೆಗಳಲ್ಲಿ ಹಾಜರಾಗದಿದ್ದಲ್ಲಿ ಎಂದು ಮತ್ತು ಪ್ರತಿ ಸಹಕಾರ ವರ್ಷದಲ್ಲಿ ಬ್ಯಾಂಕ್‌ನ ಕನಿಷ್ಠ ಸೇವೆ, ಸೌಲಭ್ಯ ಬಳಸಿಕೊಳ್ಳದಿದ್ದಲ್ಲಿ ಎಂದು ಬದಲಾವಣೆಗೆ ಕೋರಲಾಗಿದೆ. ಇದೇ ರೀತಿ ಈಗಿರುವ ಸಾಲದ ಮಿತಿಯನ್ನು 35 ಲಕ್ಷ ರೂ. ದಿಂದ 50 ಲಕ್ಷ ರೂ.ಗೆ ಹೆಚ್ಚಿಸಲು ನಿಯಮ ತಿದ್ದುಪಡಿಗೆ ಕೇಳಿಕೊಳ್ಳಲಾಗಿದೆ.

ಪಹಣಿ ಪತ್ರಿಕೆ ಆಧಾರದ ಮೇಲೆ ಬೋಜಾ ದಾಖಲಿಸಿ ಸದಸ್ಯರು ಜಾಮೀನು ಸಾಲ ಪಡೆಯುವ ಈಗಿರುವ 50 ಸಾವಿರ ರೂ. ಮಿತಿಯನ್ನು 1 ಲಕ್ಷ ರೂ.ಗೆ ಮತ್ತು ಇಬ್ಬರು ಸದಸ್ಯರ ಜಾಮೀನು ಭದ್ರತೆಯ ಮೇಲೆ ಈಗಿರುವ 20 ಸಾವಿರ ರೂ. ಜಾಮೀನು ಸಾಲವನ್ನು 50 ಸಾವಿರ ರೂ.ಗೆ ಏರಿಸಲು ಉಪನಿಯಮಕ್ಕೆ ತಿದ್ದುಪಡಿ ತಂದು ಬ್ಯಾಂಕ್ ವ್ಯವಹಾರವನ್ನು ಉತ್ತಮಗೊಳಿಸಲು ನಿರ್ಧರಿಸಲಾಗಿದೆ. ಬ್ಯಾಂಕ್ ವರದಿಯ ವರ್ಷದಲ್ಲಿ ಸದಸ್ಯರ ಷೇರುಗಳಿಗೆ ಶೇ.12 ಡಿವಿಡಂಡ್ ಹಂಚಲು ತೀರ್ಮಾನಿಸಿದೆ ಎಂದರು.

ಹಬ್ಬದ ಕೊಡುಗೆ

ಬ್ಯಾಂಕ್ ನಿರ್ದೇಶಕ ಮಂಡಳಿ ದತ್ತವಾಗಿರುವ ಅಧಿಕಾರದ ಮೇರೆಗೆ ಗ್ರಾಹಕರಿಗೆ ಹಬ್ಬದ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಹಬ್ಬದ ನಿಮಿತ್ತ ದ್ವಿಚಕ್ರ ವಾಹನ ಮತ್ತು ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲದ ಮೇಲಿನ ಬಡ್ಡಿ ದರವನ್ನು ಶೇ.1ಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದರು.

ಕಲ್ಯಾಣ ನಿಧಿ ಯೋಜನೆ ಅಡಿ ಬ್ಯಾಂಕ್‌ನ ಮೃತ ಸದಸ್ಯರ ವಾರಸುದಾರರಿಗೆ ಕಲ್ಯಾಣ ನಿಧಿ ಮತ್ತು ಬ್ಯಾಂಕಿನ ಸದಸ್ಯರು ಹಾಗೂ ಗ್ರಾಹಕರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದ್ದು ಇವುಗಳನ್ನು ಕೂಡ ಬಳಸಿಕೊಳ್ಳಲು ಅವರು ಮನವಿ ಮಾಡಿದರು.

ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿ.ಆರ್. ಕವರಿ, ಬ್ಯಾಂಕ್ ಪ್ರ.ವ್ಯವಸ್ಥಾಪಕ ಆನಂದ ಗಾಂವಕರ ಮತ್ತು ಸಿಬ್ಬಂದಿ ಸಭೆ ನಿರ್ವಹಿಸಿದರು.