ಮಡಿಕೇರಿ:
ಮಾಜಿ ಸೈನಿಕ ಕುಶಾಲನಗರದ ಅಮೆ ಜನಾರ್ದನ ಅವರಲ್ಲಿ ಈಗ ಸಂತೃಪ್ತಿಯ ನಗು ಕಂಡು ಬರುತ್ತಿದೆ. ಇವರು ತರಬೇತಿ ನೀಡಿದವರಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಲಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಸೇನೆಗೆ ಸೇರ್ಪಡೆ ಆಗಿದ್ದಾರೆ. ಈ ತಿಂಗಳ 26ಕ್ಕೆ ಅಗ್ನಿವೀರ್ ಆಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ.
ಕೂಡಿಗೆಯ ಕೊಡಗು ಸೈನಿಕ ಶಾಲೆಯ ನೌಕರರ ಪುತ್ರ ಬಿಹಾರ ಮೂಲದ ಸೌರವ್ ಕುಮಾರ್ ಬಿಹಾರ ರೆಜಿಮೆಂಟ್, ಕುಶಾಲನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಷಿತ್ ಕೆ.ಎ. ಪಂಜಾಬ್ ರೆಜಿಮೆಂಟ್, ಸೂರ್ಯ ಡಿ. ಪ್ಯಾರಾ ರೆಜಿಮೆಂಟ್, ಮೌನೇಶ್ ಜೆ. ಇಎಂಇ ಸೆಂಟರ್ ಹಾಗೂ ಅಮೆ ಜನಾರ್ದನ ಅವರ ಪುತ್ರಿ ಯಕ್ಷಿತಾ ಎ.ಜಿ. ಐಟಿಬಿಪಿಗೆ (ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್) ಆಯ್ಕೆ ಆಗಿದ್ದಾರೆ. ಈ ಮೂಲಕ ಈ ಐವರೂ ತಮ್ಮ ಜೀವನದ ಗುರಿಯನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ.
ಸೇನೆಗೆ ಸೇರಬೇಕು. ದೇಶಕ್ಕೆ ಕಿಂಚಿತ್ತು ಸೇವೆ ಸಲ್ಲಿಸಬೇಕು. ಈ ಮೂಲಕ ಬದುಕಿಗೊಂದು ಭದ್ರ ಭುನಾದಿ ಹಾಕಿಕೊಳ್ಳಬೇಕು ಎನ್ನುವ ಕನಸು ಕಾಣುತ್ತಿದ್ದ ಇವರಿಗೆಲ್ಲಾ ಸರಿಯಾದ ದಾರಿ ತೋರಿಸಿದವರು ಕುಶಾಲನಗರದ ಹವಾಲ್ದಾರ್ ಅಮೆ ಜನಾರ್ದನ (ನಿವೃತ್ತ) ಮತ್ತು ತಂಡ. ಸೈನ್ಯಕ್ಕೆ ಸೇರಲು ಬಯಸುವವರಿಗೆ ಕಳೆದ 20 ವರ್ಷಗಳಿಂದ ಈ ತಂಡ ಉಚಿತ ಮಾರ್ಗದರ್ಶನ ಕೊಡುತ್ತಿದೆ.
ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಲು ಅಗತ್ಯ ತರಬೇತಿಯನ್ನೂ ಈ ತಂಡದ ವತಿಯಿಂದ ಕೊಡಲಾಗುತ್ತಿದೆೆ. ಕೊಡಗು ಎಜ್ಯುಕೇಶನಲ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಸಹಕಾರದಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಈತನಕ ಸುಮಾರು 80ಕ್ಕೂ ಹೆಚ್ಚು ಯುವಕರು ಸೇನೆಗೆ ಸೇರುವಂತೆ ಮಾಡಿದ ಹೆಗ್ಗಳಿಗೆ ಅಮೆ ಜನಾರ್ದನ ಮತ್ತು ತಂಡದ್ದು. ಇದೀಗ ಮತ್ತೆ ಐವರನ್ನು ಭಾರತೀಯ ಸೇನೆಯ ಸೇವೆಗಾಗಿ ಇವರು ಕಳಿಸಿದ್ದಾರೆ.
ಜಗತ್ತಿನ ಅತ್ಯುತ್ತಮ ಸೇನೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯ ಭಾತೀಯ ಸೇನೆಗೆ ಆಯ್ಕೆ ಆಗುವುದು ಅಷ್ಟು ಸುಲಭವಲ್ಲ. ಕಠಿಣ ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ. ಹಾಗಾಗಿ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಬೇಕು ಎನ್ನುವ ಬಹುತೇಕ ಯುವಕರ ಕನಸು ಆಯ್ಕೆ ಹಂತದಲ್ಲೇ ಕಮರಿ ಹೋಗಿಬಿಡುತ್ತದೆ. ಆದರೆ ಸೈನ್ಯದಲ್ಲಿ ಕೆಲಸ ಮಾಡುವ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿಯಮಿತವಾಗಿ ಅಭ್ಯಾಸ ಮಾಡಿದರೆ ಸೇನೆಗೆ ಸೇರ್ಪಡೆ ಕಷ್ಟ ಅನ್ನಿಸುವುದಿಲ್ಲ ಎನ್ನುವುದು ಈಗಾಗಲೇ ಸೇವೆಯಲ್ಲಿ ಇರುವವರ ಅನುಭವದ ಮಾತು. ಈ ಹಿನ್ನೆಲೆಯಲ್ಲಿ ಆಸಕ್ತ ಯುವಕರಿಗೆ ಹವಾಲ್ದಾರ್ ಅಮೆ ಜನಾರ್ದನ(ನಿವೃತ್ತ) ಮತ್ತು ತಂಡ ಮಾರ್ಗದರ್ಶನ ನೀಡುತ್ತಾ ಬಂದಿದೆ.
ಸೇನಾ ನೇಮಕಾತಿ ರ‍್ಯಾಲಿ ಇರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಬಿದ್ದ ಕೂಡಲೇ ದೈಹಿಕ ತರಬೇತಿ ಕೊಡಲಾರಂಭಿಸುತ್ತಾರೆ. ದೇಹದಾರ್ಢ್ಯತೆ ಹೆಚ್ಚಿಸುವುದಕ್ಕೆ ಸಂಬAಧಿಸಿದAತೆ ಕುಶಾಲನಗರದ ಜಿಎಂಪಿ ಶಾಲೆ, ಕೂಡಿಗೆಯ ಕೊಡಗು ಕ್ರೀಡಾ ಶಾಲೆಯ ಮೈದಾನದಲ್ಲಿ ಪ್ರತಿನಿತ್ಯ 2 ಕಿ.ಮೀ. ಓಟ, ಲಾಂಗ್ ಜಂಪ್, ಪುಷ್‌ಅಪ್, ಪಥಸಂಚಲನ, ಯೋಗ ಹಾಗೂ ಧ್ಯಾನ ಮಾಡಿಸಲಾಗುತ್ತದೆ. ದೇಶಭಕ್ತಿ, ಶಿಸ್ತಿನ ಬಗ್ಗೆ ಪಾಠವೂ ಇರುತ್ತದೆ.
ದೈಹಿಕ ತರಬೇತಿ ಮಾತ್ರವಲ್ಲದೆ ಲಿಖಿತ ಪರೀಕ್ಷೆಗೂ ತರಬೇತಿ ಕೊಡಲಾಗುತ್ತಿದೆ. ಸೇನೆಗೆ ಆಯ್ಕೆ ಸಂದರ್ಭ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣ ಆದವರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಉಚಿತ ತರಗತಿಗಳ ಮುಖಾಂತರ ಮಾರ್ಗದರ್ಶನ ನೀಡಲಾಗುತ್ತಿದೆ. ಇಂಗ್ಲೀಷ್, ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಬೋಧಿಸಲಾಗುತ್ತದೆ.
ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಮತ್ತು ಹಾಸನ ಜಿಲ್ಲೆಗಳ ಯುವಕರೂ ಅಮೆ ಜನಾರ್ದನ ಅವರು ಕೊಡುವ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈಗಲೂ ಆಸಕ್ತ ಯುವಕರಿಗೆ ಬೆಳ್ಳಂಬೆಳಗ್ಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜನಾರ್ದನ ಬೆವರಿಳಿಸುತ್ತಿದ್ದಾರೆ. ದೂರದ ಊರಿನಿಂದ ಬರುವರಿಗೆ ತಮ್ಮ ಮನೆಯಲ್ಲೇ ಆಶ್ರಯವನ್ನೂ ಕೊಡುತ್ತಾರೆ.
ಸೇನೆಗೆ ಸೇರಲು ಬಯಸುವವರಿಗೆ ಅಮೆ ಜನಾರ್ದನ ನೇತೃತ್ವದಲ್ಲಿ ನೀಡುವ ತರಬೇತಿ ಸಂಪೂರ್ಣ ಉಚಿತ ಆಗಿರುತ್ತದೆ. ಸೇನೆಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಅಭ್ಯರ್ಥಿಗಳಿಂದ ಮಹತ್ವದ ದಾಖಲೆ ಪಡೆದುಕೊಂಡು ಹಣಕ್ಕಾಗಿ ವಂಚಿಸುವವರ ವಿರುದ್ಧವೂ ಇವರು ಜಾಗೃತಿ ಮೂಡಿಸುತ್ತಾರೆ. ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸಿದ್ದ ಯುವಕರಿಗೆ ಕೆಲಸ ಕೊಡಿಸುವುದಾಗಿ ಕರೆ ಮಾಡುವ ಅನಾಮಿಕರು ಹಣದ ಬೇಡಿಕೆ ಇಡುವುದು ಸಾಮಾನ್ಯ. ಹೀಗೆ ಹಲವರು ಹಣ ಕಳೆದುಕೊಂಡಿದ್ದಾರೆ. ಜನಾರ್ದನ ಮತ್ತು ಸಂಗಡಿಗರು ಇಂಥ ಜಾಲದ ವಿರುದ್ಧವೂ ಆಗಾಗ್ಗೆ ಎಚ್ಚರಿಕೆ ಕೊಡುತ್ತಿರುತ್ತಾರೆ.
ಯುವಕ-ಯುವತಿಯರಿಗೆ ಭಾರತೀಯ ಸೇನೆಯಲ್ಲಿ ಸಾಕಷ್ಟು ಅವಕಾಶಗಳಿದೆ. ಇದನ್ನು ಬಳಸಿಕೊಂಡು ಸೈನಿಕರ ನಾಡು ಎನ್ನುವ ಕೊಡಗಿನ ಹೆಸರನ್ನು ನಮ್ಮಂಥ ಯುವ ಜನಾಂಗ ಕಾಪಾಡಿಕೊಂಡು ಹೋಗಬೇಕು. ಈಗಾಗಲೇ ಸೇನೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಮ್ಮದೇ ಜಿಲ್ಲೆಯವರು ನಮಗೆ ಆದರ್ಶವಾಗಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ಕೂಡ ಮಾರ್ಗದರ್ಶನ ನೀಡಬೇಕು.
ಯಕ್ಷಿತಾ ಎ.ಜಿ., ಐಟಿಬಿಪಿಗೆ ಆಯ್ಕೆ ಆಗಿರುವವರು
ಸೇನೆಗೆ ಸೇರಬೇಕು, ಭಾರತಾಂಬೆಯ ಸೇವೆ ಮಾಡಬೇಕು ಎನ್ನುವ ಆಸೆ ಬಾಲ್ಯದಿಂದಲೇ ಇತ್ತು. ಈ ಆಸೆ ನೆರವೇರಲು ಅಮೆ ಜನಾರ್ದನ ಅವರು ತುಂಬಾ ಸಹಕಾರ ನೀಡಿದ್ದಾರೆ. ಅವರ ಈ ಇಳಿ ವಯಸ್ಸಿನಲ್ಲೂ ನಮ್ಮ ಜತೆ ಓಡುತ್ತಾ, ಸೇನೆಗೆ ಸೇರುವುದಕ್ಕೆ ಸಂಬAಧಿಸಿದ ಎಲ್ಲಾ ರೀತಿಯ ಮಾರ್ಗದರ್ಶನ ನೀಡುತ್ತಾ ಬಂದಿದ್ದರು. ಹಾಗಾಗಿ ನನಗೆ ಸೇನೆಗೆ ಸೇರಲು ಅನುಕೂಲ ಆಯಿತು.
ಸೂರ್ಯ ಡಿ., ಪ್ಯಾರಾ ರೆಜಿಮೆಂಟ್‌ಗೆ ಆಯ್ಕೆ ಆದವರು
2-3 ವರ್ಷಗಳಿಂದ ಅಮೆ ಜನಾರ್ದನ ಅವರ ಬಳಿ ತರಬೇತಿಗಾಗಿ ನಾನು ಬರುತ್ತಿದ್ದೆ. ಎತ್ತರ ಸ್ವಲ್ಪ ಕಡಿಮೆ ಆಗಬಹುದು ಎನ್ನುವ ಅಳಕು ಇತ್ತು. ಆದರೆ ನಿಯಮಿತ ಅಭ್ಯಾಸದಿಂದ ಈ ಕೊರಗು ದೂರ ಆಗುವಂತಾಯಿತು. ಆಯ್ಕೆ ಸಂದರ್ಭ ಸ್ವಲ್ಪ ಅನಾರೋಗ್ಯವೂ ಇತ್ತು. ಆದರೆ ಮೊದಲೇ ತಾಲೀಮು ನಡೆಸುತ್ತಿದ್ದ ಕಾರಣ ನನ್ನ ಆಯ್ಕೆಗೆ ಇದು ಸಮಸ್ಯೆ ಆಗಿಲ್ಲ.
ಮೌನೇಶ್ ಜೆ., ಇಎಂಇ ರೆಜಿಮೆಂಟ್‌ಗೆ ಆಯ್ಕೆ ಆದವರು
ಸೇನೆಗೆ ಸೇರುವ ಹಂಬಲ ಇರುವವರ ಪೈಕಿ ಬಹುತೇಕರು ನೇಮಕಾತಿ ರ‍್ಯಾಲಿ ಸಂದಭÀð ನೇರವಾಗಿ ಹೋಗಿ ಅಲ್ಲಿ ನಡೆಸುವ ಪರೀಕ್ಷೆಗಳಲ್ಲಿ ವಿಫಲರಾಗುತ್ತಾರೆ. ಸೂಕ್ತ ಸಿದ್ಧತೆಗಳ ಜೊತೆಯಲ್ಲಿ ಹೋದರೆ ಸೇನೆಗೆ ಸೇರುವುದು ಸುಲಭ. ಈ ಬಗ್ಗೆ ನಾವು ಆಸಕ್ತ ಯುವಕರಿಗೆ ಮಾಹಿತಿ ನೀಡುತ್ತೇವೆ. ನಮ್ಮಿಂದ ಮಾರ್ಗದರ್ಶನ, ತರಬೇತಿ ಪಡೆದ 80ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹವಾಲ್ದಾರ್ ಅಮೆ ಜನಾರ್ದನ್ (ನಿವೃತ್ತ), ಕುಶಾಲನಗರ