ಶಿಡ್ಲಘಟ್ಟ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಎಂಸಿಎಸ್ ರೈತರ ಆ್ಯಪ್ ಅನುಷ್ಠಾನ ಮಾಡಿದ್ದು, ರೈತರು ಪ್ರತಿದಿನ ಡೇರಿಗೆ ಸರಬರಾಜು ಮಾಡುವ ಹಾಲಿನ ಪ್ರಮಾಣ, ಗುಣಮಟ್ಟದ ಪ್ರಮಾಣ, ಹಣದ ಮಾಹಿತಿ ಸಿಗಲಿದೆ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ದೇವರಮಳ್ಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡೇರಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಡೇರಿಗಳಲ್ಲಿ ಎಎಂಸಿಎಸ್ ರೈತರ ಆ್ಯಪ್‌ನ ತಂತ್ರಾಂಶ ಅಳವಡಿಸಿದ್ದು, ರೈತರು ತಮ್ಮ ಮೊಬೈಲ್‌ಗಳಲ್ಲೂ ಆ್ಯಪ್ ಬಳಕೆ ಮಾಡಬಹುದು. ಪ್ರತಿದಿನ ಡೇರಿಗೆ ಪೂರೈಸುವ ಹಾಲಿನ ಮಾಹಿತಿ ಆಯಾ ದಿನವೇ ಸಿಗಲಿದೆ. ಇದರಿಂದ ಹಾಲಿನ ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗಲಿದೆ. ಎಲ್ಲ ಡೇರಿಗಳಲ್ಲೂ ಈ ತಂತ್ರಾಂಶ ಬಳಕೆ ಜಾರಿಯಾಗಬೇಕು. ಮುಂದಿನ ದಿನಗಳಲ್ಲಿ ಇತರ ಡೇರಿಗಳಲ್ಲೂ ಈ ತಂತ್ರಾಂಶ ಬಳಸುವ ಕಾರ್ಯವಾಗಲಿದೆ ಎಂದರು.ಸಹಕಾರ ಸಂಘಗಳ ನಿರ್ದೇಶಕರು ಸ್ವಾರ್ಥ ಬಿಟ್ಟು ಸಹಕಾರ ಸಂಘದ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.ಡೇರಿ ಅಧ್ಯಕ್ಷ ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾಧಿಕಾರಿ ವಿ.ಶ್ರೀನಿವಾಸ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದುಕೊಂಡರು.
ಉಪಾಧ್ಯಕ್ಷ ಎಂ.ಕೇಶವರೆಡ್ಡಿ, ನಿರ್ದೇಶಕರಾದ ಕೃಷ್ಣಪ್ಪ, ಬಿ.ಎಲ್.ನಂಜುಂಡಪ್ಪ, ಎಂ.ಆನಂದ್, ಮುನಿರೆಡ್ಡಿ, ಲಿಂಗಪ್ಪ, ಶಶಿಕುಮಾರ್, ಅಶೋಕ್ ಕುಮಾರ್, ವೆಂಕಟೇಶ್, ಗೌರಮ್ಮ, ರಾಧಮ್ಮ, ಬೈರಮ್ಮ, ಡೇರಿಯ ಮುಖ್ಯ ಕಾರ್ಯನಿರ್ವಾಹಕ ವಿ.ಮಂಜುನಾಥ್, ಗ್ರಾ.ಪಂ.ಸದಸ್ಯ ವೆಂಕಟೇಶ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.