ಜಿಲ್ಲೆ

ಎರಡು ವಾಹನಗಳ ಮಧ್ಯೆ ಅಪ್ಪಚ್ಚಿಯಾಗಿ ಧಗಧಗ ಉರಿದ ಆಂಬುಲೆನ್ಸ್;‌ ಒಳಗಿದ್ದವರು ಹೊರಟಿದ್ದು ನಿಮ್ಹಾನ್ಸ್‌ಗೆ, ಸೇರಿದ್ದು ವಿಕ್ಟೋರಿಯಾಗೆ!

Webdesk - Ravikanth

ನೆಲಮಂಗಲ: ಸರಣಿ ಅಪಘಾತಕ್ಕೆ ಒಳಗಾದ ಆಂಬುಲೆನ್ಸ್‌ ಎರಡು ವಾಹನಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದ್ದು, ಡಿಕ್ಕಿಯ ತೀವ್ರತೆಯಿಂದಾಗಿ ಆಂಬುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿಯಲಾರಂಭಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ದಾಬಸ್‌ಪೇಟೆ ಸಮೀಪದ ಎಡೇಹಳ್ಳಿ ಬಳಿ ಈ ಸರಣಿ ಅಪಘಾತ ಸಂಭವಿಸಿದೆ.

ಮೊದಲು ಕಂಟೇನರ್‌ ವಾಹನಕ್ಕೆ ಆಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಆಂಬುಲೆನ್ಸ್‌ಗೆ ಹಿಂದಿನಿಂದ ಬರುತ್ತಿದ್ದು ಕಾರು ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ತೀವ್ರತೆಗೆ ಆಂಬುಲೆನ್ಸ್‌ನಲ್ಲಿ ಬೆಂಕಿ ಉಂಟಾಗಿ ವಾಹನ ಧಗಧಗ ಉರಿಯಲಾರಂಭಿಸಿದೆ. ತಕ್ಷಣ ಸ್ಥಳೀಯರು ಧಾವಿಸಿ ಟ್ಯಾಂಕರ್‌ ವಾಹನದಿಂದ ಬೆಂಕಿ ನಂದಿಸಿದ್ದಾರೆ.

ಆಂಬುಲೆನ್ಸ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸೇರಿ ಐವರಿದ್ದರು. ಆಂಬುಲೆನ್ಸ್‌ ತುಮಕೂರಿನಿಂದ ಬೆಂಗಳೂರಿಗೆ ಸಾಗುತ್ತಿದ್ದು, ರೋಗಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯುವಾಗ ಈ ಅಪಘಾತ ಸಂಭವಿಸಿದೆ. ಆಂಬುಲೆನ್ಸ್‌ನಲ್ಲಿದ್ದ ಅಸೀನಾ (50), ಶಬೀನಾ (45) ಇಬ್ಬರಿಗೂ ಸುಟ್ಟಗಾಯಗಳಾಗಿದ್ದು, ಆಂಬುಲೆನ್ಸ್‌ ಚಾಲಕ ಸಾದಿಖ್‌ ಕಾಲು ಮುರಿದಿದೆ. ಇನ್ನೊಬ್ಬ ಸಾದಿಖ್‌ ಹಾಗೂ ಸಲ್ಮಾನ್‌ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳಿಗೆ ನೆಲಮಂಗಲ ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಗಂಭೀರ ಗಾಯಗೊಂಡ ಮಹಿಳೆಯರಿಬ್ಬರು ಹಾಗೂ ಕಾಲು ಮುರಿತಕ್ಕೊಳಗಾಗಿರುವ ಗಾಯಾಳು ಚಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಅಪ್ಪಚ್ಚಿಯಾಗಿ ಸುಟ್ಟುಹೋಗಿರುವ ಆಂಬುಲೆನ್ಸ್