ಜಿಲ್ಲೆ

ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್​​ ಡಿಕ್ಕಿ; ಶವ ಕೊಂಡೊಯ್ಯುತ್ತಿದ್ದವರು ಮಸಣ ಸೇರಿದರು

Webdesk - Manjunatha B

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್​ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಬಳಿ ನಡೆದಿದೆ.

ಅಪಘಾತದಲ್ಲಿ ತಮಿಳುನಾಡಿನ ತಿರುನಾಳವೇಲಿಯ ಕನಕಮಣಿ(72), ಆಕಾಶ್ (17), ಗುಜರಾತ್​ ಮೂಲದ ಆ್ಯಂಬುಲೆನ್ಸ್​ ಚಾಲಕ ಮೃತಪಟ್ಟಿದ್ಧಾರೆ. ಜ್ಞಾನಶೇಖರ್​(51), ಮೌಳಿ ರಾಜನ್​(45) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ್​ ತಮಿಳುನಾಡು ಮೂಲದ ಕನಕಮಣಿ ಮತ್ತು ಕುಟುಂಬಸ್ಥರು ಅಹಮದಾಬಾದ್​ನಲ್ಲಿ ನೆಲೆಸಿದ್ದಾರೆ. ಕುಟುಂಬದ ಸದಸ್ಯರೊಬ್ಬರು ಅಕಾಲಿಕ ನಿಧನದಿಂದಾಗಿ ಅವರ ಮೃತದೇಹವನ್ನು ಗುಜರಾತಿನಿಂದ ತಮ್ಮ ತವರೂರಿಗೆ ಕೊಂಡೊಯ್ಯುತ್ತಿದ್ದರು.

ನಿದ್ದೆ ಮಂಪರಿನಲ್ಲಿ ಅಪಘಾತ ಶಂಕೆ

ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಆಂಬ್ಯುಲೆನ್ಸ್​ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನಿರಂತರವಾಗಿ ಪ್ರಯಾಣಿಸುತ್ತಿದ್ದ ಕಾರಣ ಆ್ಯಂಬುಲೆನ್ಸ್​ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ.

ವೇಗವಾಗಿ ಆ್ಯಂಬುಲೆನ್ಸ್​ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೀಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ್​ ತಿಳಿಸಿದ್ದಾರೆ.