ಜಿಲ್ಲೆ

ದಾವಣಗೆರೆಯ ಅಂಬ್ಯುಲೆನ್ಸ್ ಅಪಘಾತ ರೋಗಿ ಮೃತ್ಯು, ಇಬ್ಬರಿಗೆ ಗಾಯ

ಮಂಗಳೂರು: ನಗರದ ಆಸ್ಪತ್ರೆಯೊದಕ್ಕೆ ದಾವಣಗೆರೆಯಿಂದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ವೇಳೆ ನಂತೂರು ಬಳಿ ಅಂಬುಲೆನ್ಸ್ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ರೋಗಿ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ದಾವಣಗೆರೆ ನಿವಾಸಿ ಈಸ ಸಾಹೇಬ್ (54) ಮೃತಪಟ್ಟವರು. ವಾಹೀದ ಬಾನು (50), ಹಮೀದಾಬಿ (63) ಗಾಯಗೊಂಡವರು.

ಪ್ರಕರಣ ವಿವರ: ಈಸ ಸಾಹೇಬ್ ಅವರಿಗೆ ಅ.11ರಂದು ಪಾರ್ಶ್ವವಾಯು ಆಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅ.12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆತರಲಾಗುತ್ತಿತ್ತು. ದಾರಿ ಮಧ್ಯೆ ರೋಗಿಯು ತೀವ್ರ ಅನಾರೋಗ್ಯದಿಂದ ಒದ್ದಾಡುತ್ತಿದ್ದುದರಿಂದ ಕೈಗೆ ಅಳವಡಿಸಿದ್ದ ಡ್ರಿಪ್ಸ್ ಕಳಚಿದ್ದು, ರಾತ್ರಿ ಸುಮಾರು 12 ಗಂಟೆಗೆ ಶಿವಮೊಗ್ಗದ ಆಸ್ಪತ್ರೆಗೆ ಬಂದು, ಆಸ್ಪತ್ರೆಯವರನ್ನು ಕರೆಸಿ, ಡ್ರಿಪ್ಸ್ ಸೂಜಿಯನ್ನು ಮತ್ತೆ ಅಳವಡಿಸಿ, ಇನ್ನೊಂದು ಬಾಟಲಿ ಗ್ಲೂಕೋಸ್ ತೆಗೆದುಕೊಂಡು ಮಂಗಳೂರಿಗೆ ಹೊರಟಿದ್ದರು. ಅ.13ರಂದು ಮುಂಜಾನೆ 4 ಗಂಟೆಗೆ ಅಂಬ್ಯಲೆನ್ಸ್ ನಂತೂರು ಸರ್ಕಲ್ ದಾಟಿ ತೆರಳುತಿತ್ತು.

ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಾಂಕ್ರೀಟ್‌ನ ಪಿಲ್ಲರ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯಾದ ಪರಿಣಾಮ ಅಂಬ್ಯುಲೆನ್ಸ್ ನಲ್ಲಿನ ಸ್ಟ್ರೆಚರ್ ಮೇಲೆ ಮಲಗಿದ್ದ ಈಸ ಸಾಹೇಬ್ ಅವರು ಉರುಳಿ ಅಂಬ್ಯುಲೆನ್ಸ್ ಒಳಗೆ ಕೆಳಗೆ ಬಿದ್ದಿದ್ದು, ಅವರ ಕೈಗೆ ಅಳವಡಿಸಿದ ಡ್ರಿಪ್ಸ್, ಮುಖಕ್ಕೆ ಹಾಕಿದ್ದ ಆಮ್ಲಜನಕ ಕವರ್ ಕಿತ್ತು ಹೋಗಿದೆ. ಇದು ಮಾತ್ರವಲ್ಲದೆ ವಾಹನದಲ್ಲಿದ್ದ ವಾಹೀದ ಬಾನು ಹಣೆಗೆ, ತಲೆಗೆ, ಎದೆಗೆ ಗುದ್ದಿದ ಗಾಯವಾಗಿದೆ. ಈಸ ಸಾಹೇಬ್ ಅವರ ಅಕ್ಕ ಹಮೀದಾಬಿರವರಿಗೂ ಎದೆಗೆ, ಹೊಟ್ಟೆಗೆ ಗುದ್ದಿದ ಗಾಯವಾಗಿದೆ. ಅಂಬ್ಯುಲೆನ್ಸ್ ಚಾಲಕ ಕರಿಯಪ್ಪನಿಗೆ ತಲೆಗೆ, ಕಾಲಿಗೆ ರಕ್ತ ಗಾಯವಾಗಿದೆ.

ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಈಸ ಸಾಹೇಬ್ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಉಳಿದ ಇಬ್ಬರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.