ಮೈಸೂರು: ಮನುಷ್ಯರ ನಡುವೆ ಇದ್ದ ತಾರತಮ್ಯವನ್ನು ತೊಡೆದು ಹಾಕಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯರ ನಡುವೆ ಇದ್ದಂತಹ ತಾರತಮ್ಯ ತೊಡೆದು ಹಾಕಿ ತಮ್ಮ ವಚನಗಳ ಮೂಲಕ ಬೆಳಕನ್ನು ಚೆಲ್ಲಿದ ಅಂಬಿಗರ ಚೌಡಯ್ಯ ಅವರಂತಹ ವಚನಕಾರರು ಸಮಾಜಕ್ಕೆ ದಾರಿದೀಪ ಎಂದು ಹೇಳಿದರು.
ಅನುಭವ ಮಂಟಪದ ಸುತ್ತ ನದಿ, ಹೊಳೆ ಏನು ಇಲ್ಲ, ಆದರೂ ಹೇಗೆ ನೀವು ಅಂಬಿಗರ ವೃತ್ತಿಯನ್ನು ಮಾಡುತ್ತೀರಾ? ಎಂದು ಕೇಳಿದಾಗ ಮಾನವ ಎಂಬ ಸಂಪನ್ಮೂಲ ಏನಿದೆ ಅದರ ಹೊಳೆಯಲ್ಲಿ ಮನುಷ್ಯರ ನಡುವೆ ತಾರತಮ್ಯ ಹೊಡೆದು ಹಾಕಿ ಅವರೆಲ್ಲರನ್ನೂ ದಡ ಸೇರಿಸುತ್ತೇನೆ ಎಂದು ವಿಶ್ಲೇಷಿಸಿದ್ದರು. ಅಂತಹ ಅಂತರದೃಷ್ಟಿ ಅವರಲ್ಲಿತ್ತು ಎಂದು ಹೇಳಿದರು.
ಅನುಭವ ಮಂಟಪವನ್ನು ಮೊದಲ ಪಾರ್ಲಿಮೆಂಟ್ ಎಂದು ಕರೆಯುತ್ತೇವೆ. ಅನುಭವ ಮಂಟಪದ ಚಿತ್ರಣವನ್ನು ವಿಧಾನಸಭೆಯಲ್ಲಿ ಅನಾವರಣ ಮಾಡಿರುವುದು ಶ್ಲಾಘನೀಯ ಎಂದರು.
ಅಂಬಿಗರ ಚೌಡಯ್ಯ ಅವರು ಸಾವಿರಾರು ವಚನಗಳನ್ನು ಬರೆದಿದ್ದಾರೆ ಎಂಬ ಮಾಹಿತಿ ನಮಗೆ ಇದ್ದರೂ ಆನೇಕ ವಚನಗಳು ಲಭ್ಯವಾಗಿಲ್ಲ. ಈಗ 275 ರಿಂದ 300 ವಚನಗಳು ಮಾತ್ರ ಉಳಿದುಕೊಂಡಿದ್ದು, ಅವುಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್.ಎನ್.ಪದ್ಮನಾಭ ಮಾತನಾಡಿ, ಅಂಬಿಗರ ಚೌಡಯ್ಯ ದೈತ್ಯ ಪ್ರತಿಭೆ, ಮಹಾಯೋಗಿ, ಭಾರತ ದರ್ಶನದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ. ಅವರ ಅನುಭವದಿಂದ ಸತ್ಯವನ್ನು ತಿಳಿಸಿದ ಮಹಾಪುರುಷ, ಮಹಾಹರಿಕಾರ, ಕ್ರಾಂತಿಕಾರಿ ಚಿಂತಕ ಎಂದು ಬಣ್ಣಿಸಿದರು.
ಸಮಾಜದ ಭೂಟಾಟಿಕೆ ವ್ಯವಸ್ಥೆಯನ್ನು ಕಂಡು ಕೋಪಕೊಂಡು ಸಮಾಜದ ಧೋರಣೆಗಳನ್ನು ನಿಜ ಶರಣರಾಗಿ ಖಂಡಿಸಿದವರು ಅಂಬಿಗರ ಚೌಡಯ್ಯ. ನಿಜವಾಗಿಯೂ ಅವರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅವರ ವಚನಗಳನ್ನು ಓದಬೇಕು. ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಾವು ಅವರಿಗೆ ಗೌರವವನ್ನು ಸಲ್ಲಿಸಿದಂತೆ ಆಗುತ್ತದೆ ಎಂದು ಹೇಳಿದರು.
ನಮ್ಮ ಬದುಕಿನಲ್ಲಿ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಹಾಗೂ ವಚನಗಳು ಎಂಬ ಐದು ಚಿನ್ನದ ಗಣಿಗಳಿದ್ದು, ಮೇಲಿನ ನಾಲ್ಕು ಗಣಿಗಳಿಗಿಂತ ವಚನ ಸಾಹಿತ್ಯ ತುಂಬಾ ಸುಲಭ, ಸಾಧಾರಣ ಹಾಗೂ ಸರಳವಾಗಿದೆ. ಈ ಐದು ಚಿನ್ನದ ಗಣಿಗಳನ್ನು ಅರಿತು ಯಾರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತರೋ ಅಂತಹವರು ಸಂತೋಷ, ಸುಖ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮುಖಂಡ ರಂಗಸ್ವಾಮಿ, ಅಂಬಿಗರ ಚೌಡಯ್ಯ ಸಮುದಾಯದ ಮುಖಂಡರು ಇದ್ದರು.