ಮಂಡ್ಯ: ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೇಲು ಕೀಳು ಮತ್ತು ಇನ್ನಿತರ ಮೂಢನಂಬಿಕೆ ಹೋಗಲಾಡಿಸಲು ಹಾಗೂ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ವ್ಯಕ್ತಿಗಳ ಸ್ಮರಣೆ ಮಾಡುವುದರ ಜತೆಗೆ ಕೊಡುಗೆಗಳನ್ನು ಯುವ ಜನತೆಗೆ ತಿಳಿಸಲು ಜಯಂತಿ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವನಂದಮೂರ್ತಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ತಿದ್ದುವ ಉದ್ದೇಶದಿಂದ ಅಂಬಿಗರ ಚೌಡಯ್ಯ ಅವರು ಅನೇಕ ವಚನ ರಚಿಸಿದರು. ಅವರ ರಚಿಸಿರುವ ವಚನಗಳಲ್ಲಿರುವ ತತ್ವ ಮತ್ತು ಆದರ್ಶಗಳನ್ನು ಯುವಜನತೆ ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಕಾಯಕವನ್ನೇ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡು ಜಗತ್ತಿನ ಎಲ್ಲರನ್ನೂ ಸಮಾನ ಪ್ರೀತಿಯಿಂದ ಕಂಡವರು ವಚನಕಾರರು. ಜಾತಿ ಮತ ಧರ್ಮ ಪಂಥಗಳ ಹಂಗು ತೊರೆದು ನಾವು ಮೂಲತಃ ಮಾನವಧರ್ಮಿಯರೆಂದು ಪ್ರತಿಪಾದಿಸಿದವರು ಅಂಬಿಗರ ಚೌಡಯ್ಯ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಸಮಾಜವನ್ನು ತಿದ್ದಿದ ಮಹನೀಯ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಸಹ ಒಬ್ಬರು. ಇಂತಹ ಮಹಾನ್ ಚೇತನರ ಬದುಕು ನಮ್ಮೆಲ್ಲರಿಗೂ ಆದರ್ಶ. ಅವರ ವಚನದ ಆಶಯವನ್ನು ಅರಿತುಕೊಂಡು ಅದರಂತೆ ಬದುಕೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ ನಂದೀಶ್, ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ವಿವಿಧ ಸಂಘಟನೆ ಮುಖಂಡರಾದ ದೇವರಾಜ್, ಗಾಯತ್ರಿ, ಟಿ.ಕೃಷ್ಣ, ಕೆ.ತಮ್ಮಣ್ಣ, ದೇವಾನಂದ್ ಇತರರಿದ್ದರು.
ಮೆರವಣಿಗೆಗೆ ಚಾಲನೆ: ಜಯಂತಿ ಅಂಗವಾಗಿ ಅಂಬಿಗರ ಚೌಡಯ್ಯ ಭಾವಚಿತ್ರವನ್ನಿಟ್ಟು ಜಿಲ್ಲಾಧಿಕಾರಿ ಕಚೇರಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗಾರಿ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಇತರರಿದ್ದರು.