ಮಂಡ್ಯ: ಜಾತಿ ಪದ್ಧತಿ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಶೋಷಣೆ ಮಾಡುವವರ ವಿರುದ್ಧ ಅಂಬಿಗರ ಚೌಡಯ್ಯ ಅವರು ವಚನಗಳ ಮೂಲಕ ದಾಳಿ ಮಾಡುತ್ತಿದ್ದರು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗಂಗಾಮತಸ್ಥರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಬಸವಣ್ಣರ ಸಮಕಾಲೀನರಾದ ಅಂಬಿಗರ ಚೌಡಯ್ಯ ಅವರ ಮಾತು ನಿಷ್ಠೂರವಾಗಿತ್ತು. ಸಮಾಜದಲ್ಲಿ ಮೇಲು, ಕೀಳು ಎನ್ನುವ ಭಾವನೆಯನ್ನು ಹೋಗಲಾಡಿಸಲು ಅಂಬಿಗರ ಚೌಡಯ್ಯ ಅವರು ವಚನಗಳ ಮೂಲಕ ಹೋರಾಟ ನಡೆಸಿದರು ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಲಿಂಗಣ್ಣ, ಜಿಲ್ಲಾ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ಕೃಷ್ಣಯ್ಯ, ಅಧ್ಯಕ್ಷ ಎಸ್.ರಮೇಶ್, ಡಾ.ಜಯರಾಮ್, ಶಿವರಾಜ್ ನಾಟಿಕರ್, ಮೀನುಗಾರಿಕೆ ಮಹಾಮಂಡಳಿ ಅಧ್ಯಕ್ಷ ಸಿದ್ದಲಿಂಗರಾಜು, ಕೆ.ತಮ್ಮಣ್ಣ, ಗಾಯತ್ರಮ್ಮ, ಚಂದ್ರ, ಪ್ರಭಾವತಿ ಇತರರಿದ್ದರು.
ಬೇಸರ ವ್ಯಕ್ತಪಡಿಸಿದ ಮಾಜಿ ಸಚಿವ: ಜಯಂತ್ಯುತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳ ಗೈರಿಗೆ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಂತ್ಯುತ್ಸವಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಬೇಕಿತ್ತು. ಜನಪ್ರತಿನಿಧಿಗಳಿಗೆ ಬೇರೆ ಕಾರ್ಯಕ್ರಮಗಳಿರಬಹುದು. ಆದರೆ ಅಧಿಕಾರಿಗಳು ತಪ್ಪದೇ ಪಾಲ್ಗೊಳ್ಳಬೇಕಿತ್ತು. ಇನ್ನು ಮುಂದಾದರೂ ಈ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.