ಪುತ್ತೂರು: ಬಲಿದಾನ, ತ್ಯಾಗ, ಅಪರಿಮಿತ ದೇಶಭಕ್ತಿಯ ಕಾರಣದಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ತಾಯಿ ಭಾರತಿಗಾಗಿ ಪ್ರಾಣಾರ್ಪಣೆ ಮಾಡಿದವರನ್ನು ನೆನೆದುಕೊಂಡು ಸ್ವಾತಂತ್ರ್ಯ ದಿನ ಆಚರಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಿರಿಯ ವಿದ್ಯಾರ್ಥಿ ಸಂಕೇತ್ ಶೆಟ್ಟಿ ಹೇಳಿದರು.
ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾ ವಿದ್ಯಾಲಯ ಕೋಚಿಂಗ್ ಸೆಂಟರ್ ಪುತ್ತೂರಿನಲ್ಲಿ ಆರಂಭಗೊಂಡು ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಂಬಿಕಾ-೨೫ ಲೋಗೋ ಅನಾವರಣಗೊಳಿಸಲಾಯಿತು.
ಸಂಸ್ಥೆ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ, ಆಡಳಿತಾಽಕಾರಿ ಗಣೇಶ ಪ್ರಸಾದ್ ಎ, ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಾಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಧರಣಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಜಶ್ಮಿ ಡಿ.ಎಸ್. ಸ್ವಾಗತಿಸಿದರು. ಜಾನ್ವಿ ಸಚಿನ್ ಶೆಟ್ಟಿ ವಂದಿಸಿದರು. ವೈಷ್ಣವಿ ಪೈ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆ
ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಧ್ವಜಾರೋಹಣ ನೆರವೇರಿಸಿದರು. ನೆಲ್ಲಿಕಟ್ಟೆ ಅಂಬಿಕಾ ಆವರಣದಲ್ಲಿ ರಾಜಶ್ರೀ ಎಸ್. ನಟ್ಟೋಜ ಧ್ವಜಾರೋಹಣಗೈದರು. ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಿಂದ ಕಿಲ್ಲೆ ಮೈದಾನ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ಮೆರವಣಿಗೆ ನಡೆಯಿತು.
ದೇಶದ ಬಗೆಗೆ ಪ್ರತಿಯೊಬ್ಬರಿಗೂ ಭಕ್ತಿ ಇರಬೇಕು. ಈ ದೇಶದ ಗಾಳಿ ನೀರು ಸೇವನೆ ಮಾಡಿ, ಇಲ್ಲಿನ ಸಮಾಜದಿಂದ ಲಾಭ ಪಡೆದು ಬದುಕುವ ನಾವು ಕನಿಷ್ಠ ಸ್ವಾತಂತ್ರ್ಯ ದಿನದಂದಾದರೂ ಮನೆಯಿಂದ ಹೊರಬಂದು ರಾಷ್ಟ್ರಧ್ವಜಕ್ಕೆ ನಮಿಸದಿದ್ದರೆ ಬದುಕಿಗೆ ಅರ್ಥವಿಲ್ಲ. ಇದನ್ನು ತಿಳಿಸಿಕೊಡುವ ಶಿಕ್ಷಣವೇ ನಿಜವಾದ ಶಿಕ್ಷಣ.
| ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ