ಜಿಲ್ಲೆ

ಬಲ್ಲವರ ಸಹವಾಸದಿಂದ ಬೆಳಗುತ್ತದೆ ವ್ಯಕ್ತಿತ್ವ - ಡಾ. ಎಚ್ ಮಾಧವ ಭಟ್ ಹೇಳಿಕೆ - ಅಂಬಿಕಾ ಕಾಲೇಜಿನಲ್ಲಿ ಸ್ಪರ್ಧೆಗಳ ಉದ್ಘಾಟನೆ

Mangaluru - Nishantha Narayana


ಪುತ್ತೂರು: ಬದುಕಿನಲ್ಲಿ ಸ್ಮೃತಿ ಮತ್ತು ವಿಸ್ಮೃತಿ ಬರುವುದು ಸಹಜ. ಒಳ್ಳೆಯ ವಿಚಾರಗಳನ್ನು ಸದಾ ನೆನಪಿಟ್ಟುಕೊಳ್ಳುವ ಜತೆಗೆ ಋಣಾತ್ಮಕ ಅಂಶಗಳನ್ನು ಮರೆತುಬಿಡಬೇಕು. ಒಳ್ಳೆಯ ನಡೆ-ನುಡಿ ಆಚಾರ-ವಿಚಾರ ಬಲ್ಲವನ ಸಹವಾಸ ಮಾಡುವುದರಿಂದ ನಮ್ಮ ವ್ಯಕ್ತಿತ್ವ ಬೆಳಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್ ಮಾಧವ ಭಟ್ ಹೇಳಿದರು.


ಸೋಮವಾರ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ೨೫ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಭಾಷಣ ಹಾಗೂ ದೇಶಭಕ್ತಿ ಗೀತೆಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.


ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ಸ್ಪರ್ಧೆಯಲ್ಲಿ ವಿಜಯಿಯಾಗುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ. ಸಮಾನತೆಯ ಭಾವವನ್ನಿರಿಸಿ ಧನಾತ್ಮಕ ಚಿಂತನೆಯೊಂದಿಗೆ ಎಲ್ಲರೂ ಭಾಗವಹಿಸಿದಾಗ ಅತ್ಯುತ್ತಮ ಅನುಭವ ನಮ್ಮದಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನಮ್ಮಲ್ಲಿ ರಾಷ್ಟ್ರೀಯ ಚಿಂತನೆಗಳು ಬೆಳೆಯಬೇಕು. ಈ ನಿಟ್ಟಿನಲ್ಲಿ ಅಂಬಿಕಾ ಹೊಸ ಯೋಚನೆ-ಯೋಜನೆಗಳ ಮೂಲಕ ದೇಶಭಕ್ತಿಯನ್ನು ಸಾರುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಭೌತಶಾಸ ಉಪನ್ಯಾಸಕ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.