ಜಿಲ್ಲೆ

ಆದರ್ಶ ವ್ಯಕ್ತಿಯಾಗಿದ್ದ ಅಂಬಿಗರ ಚೌಡಯ್ಯ : ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಅಭಿಪ್ರಾಯ

ಕೋಲಾರ : ವಚನಗಳ ಮೂಲಕ 12ನೇ ಶತಮಾನದಲ್ಲಿ ಸಮಾಜದಲ್ಲಿನ ಶೋಷಣೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರು, ಶೋಷಣೆ ವಿರುದ್ಧ ಹೋರಾಟ ಮಾಡಿದ ನಿಜಧೀರ ಚೌಡಯ್ಯ ಎಂಬ ಖ್ಯಾತಿ ಪಡೆದರು. ಚೌಡಯ್ಯ ಕಾಯಕಕ್ಕೆ ವಿಶೇಷ ಮಾನ್ಯತೆ ನೀಡಿದರು.

ಭಕ್ತಿಯಿಂದ ಪೂಜಿಸಿದರೆ ಶಿವ ಒಲಿಯುತ್ತಾನೆ ಎಂಬ ಸಂದೇಶ ಸಾರಿದ ಚೌಡಯ್ಯ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದರು ಎಂದರು. ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಮಾತನಾಡಿ, 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ವಚನ ಚಳವಳಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಪರಿಶುದ್ಧ ಹೃದಯದಲ್ಲಿ ದೇವರು ನೆಲೆಸುತ್ತಾನೆ. ಕಲ್ಯಾಣ ಕ್ರಾಂತಿ ಸಮಯದಲ್ಲಿ ವಚನಕಾರರ ರಕ್ಷಣೆ ಮಾಡಿದ ಕೀರ್ತಿ ಚೌಡಯ್ಯ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಬೆಸ್ತ ಸಮುದಾಯದ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ಚೌಡಯ್ಯನವರ ವಚನಗಳು, ಸಮಾಜದಲ್ಲಿನ ಮೇಲು-ಕೀಲು ಎಂಬ ಶೋಷಣೆ ವಿರುದ್ಧ ಹೋರಾಡುವಂತೆ ಪ್ರೇರೇಪಿಸುತ್ತಿದ್ದವು. ಸಮಾಜದ ಅಂಕು-ಡೊಂಕುಗಳನ್ನು ವಚನಗಳ ಮೂಲಕ ತಿದ್ದಿ ಜನರಲ್ಲಿ ಜಾಗೃತಿ ಮೂಡಿಸಿದರು. ಜಿಲ್ಲೆಯಲ್ಲಿ ಚೌಡಯ್ಯನವರ ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಹಿಂದುಳಿದ ಒಕ್ಕಟದ ಪ್ರಧಾನ ಕಾರ್ಯದರ್ಶಿ ಪಲ್ಗುಣ, ಹಿಂದುಳಿದ ಒಕ್ಕೂಟದ ನಿರ್ದೇಶಕ ವಿಷ್ಣು, ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷ ಕೆ.ರಾಜೇಶ್ ಸಿಂಗ್, ಮರಾಠ ಸಂಘದ ಜಿಲ್ಲಾಧ್ಯಕ್ಷ ಎಸ್.ರಾಜಾರಾವ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಅನಂತ್, ಜನಾಂಗದ ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ , ಮುಖಂಡ ಬೆಳ್ಳಂಬರಿ ನಾಗರಾಜ್ ಇದ್ದರು.

ಅಂಬಿಗರ ಚೌಡಯ್ಯ ಅವರು ನೇರನುಡಿ ವ್ಯಕ್ತಿತ್ವದ ವಚನಕಾರ, ಸಾಮಾಜಿಕ ವಿಮರ್ಶಕ. ಒಗ್ಗಟಿನಿಂದ ಹಿಂದುಳಿದ ಜನಾಂಗದ ಅಭಿವೃದ್ಧಿ ನಿಗಮದ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜತೆಗೆ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ರಾಜಣ್ಣ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ