ಮೈಸೂರು: ಭಾರತ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾಗಲು ಪ್ರಮುಖ ಕಾರಣ ಡಾ.ಬಿ.ಆರ್. ಅಂಬೇಡ್ಕರ್ ಎಂದು ಶಾಸಕ ಎಸ್.ಎ. ರಾಮದಾಸ್ ಬಣ್ಣಿಸಿದರು.
ಅಶೋಕಪುರಂ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಸ್ಮರಣಾರ್ಥವಾಗಿ ವಿಶ್ವೇಶ್ವರನಗರದ ರುದ್ರಭೂಮಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿಗೆ 66 ವರ್ಷಗಳ ಹಿಂದೆ ಅಂಬೇಡ್ಕರ್ ನಮ್ಮನ್ನಗಲಿದರು. ದೇಶ, ವಿದೇಶದ ಲಕ್ಷಾಂತರ ಜನರ ಸಮ್ಮುಖದಲ್ಲಿ ಅವರ ದೇಹ ನಮ್ಮಿಂದ ದೂರಾದರೂ ಇಂದಿಗೂ ಅವರ ಕಾರ್ಯಗಳು, ಆದರ್ಶ ನಮ್ಮೊಂದಿಗಿವೆ. ಮಾತಿಗಿಂತ ಕಾರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.
ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತು. ಇದಕ್ಕೆ ಬದ್ಧವಾಗಿ ನಮ್ಮ ಸರ್ಕಾರ ಶಿಕ್ಷಣದಲ್ಲಿ ದಲಿತರಿಗೆ ಶೇ.2ರಷ್ಟು ಮೀಸಲಾತಿ ಹೆಚ್ಚಳ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ 5 ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪಂಚತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಅಂಬೇಡ್ಕರ್ ಸಂವಿಧಾನ ಬರೆಯದೆ, ನಮಗೆಲ್ಲ ಮತದಾನದ ಹಕ್ಕು ನೀಡದಿದ್ದರೆ ಇಂದು ನಾವೆಲ್ಲರೂ ಈ ರೀತಿ ಒಟ್ಟಾಗಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಬದುಕಿದ್ದು 65 ವರ್ಷವಾದರೂ ಅನಿಷ್ಟ ಜಾತಿ ಪದ್ಧತಿಯ ವಿರುದ್ಧ ಹೋರಾಡಿ, ತಮ್ಮ ಬದುಕನ್ನೇ ಸಮಾಜಕ್ಕೆ ಅರ್ಪಿಸಿದ ಮಹಾನ್ ಮಾನವತಾವಾದಿ. ವರ್ಷದ 365 ದಿನವೂ ನೆನಪಿಸಿಕೊಳ್ಳುವ ವಿಶ್ವದ ಏಕೈಕ ವ್ಯಕ್ತಿ. ಅವರು ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ಅಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ವಿಶ್ವದ ನಂ.1 ನಾಯಕನಾಗಿದ್ದಾರೆ ಎಂದರು.
ಸಮಸ್ತ ಭಾರತೀಯರು ಸಂವಿಧಾನದ ಫಲಾನುಭವಿಗಳಾಗಿದ್ದಾರೆ. ಕೆಲವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಎಂದೆಂದಿಗೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ. ಕೆಲವರು ಅಂಬೇಡ್ಕರ್ ಬಂಧುಗಳ ಹೆಸರು ಹೇಳುವುದಕ್ಕೂ ಅಸಹ್ಯಪಟ್ಟುಕೊಳ್ಳುತ್ತಿದ್ದು, ಇಂದಿಗೂ ಅಸ್ಪಶ್ಯತೆ ಆಚರಣೆ ಮಾಡುತ್ತಿದ್ದಾರೆ. ಇದರಿಂದಾಗಿ ಸ್ವಾತಂತ್ರ್ಯ ಸಿಕ್ಕರೂ ದಲಿತರು ಹೆಚ್ಚು ತುಳಿತಕ್ಕೊಳಗಾಗುತ್ತಿದ್ದಾರೆ ಎಂದರು.
ಇದೇ ವೇಳೆ ಉಚಿತ ಆರೋಗ್ಯ ತಪಾಸಣೆ ಜತೆಗೆ ಔಷಧ, ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಬ್ಯಾಗ್ ವಿತರಿಸಲಾಯಿತು. ಬುದ್ಧನ ಪ್ರಾರ್ಥನಾ ಮಂದಿರ ನಿರ್ಮಾಣ, ಅಶೋಕಪುರಂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಶಾರದಾ, ಶಾಂತಮ್ಮ ವಡಿವೇಲು, ಸಮಿತಿ ಅಧ್ಯಕ್ಷ ಅರುಣ್ ಬುದ್ಧ, ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶೆಣೈ ಇತರರಿದ್ದರು.