ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಆಲೋಚನೆ ಮತ್ತು ದೃಷ್ಟಿಕೋನಗಳು ಕಾಲವನ್ನು ಮೀರಿದವಾಗಿದ್ದವು ಎಂದು ತಹಸೀಲ್ದಾರ್ ಪ್ರತಿಭಾ ಹೇಳಿದರು.
ಕಾಪು ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸ್ವಾತಂತ್ರ್ಯ, ಸಾಮಾಜಿಕತೆ, ಆರ್ಥಿಕ ಸಮಾನತೆ, ಹಿಂದುಳಿದ ವರ್ಗ-ಜಾತಿಗಳಿಗೆ ಉತ್ತಮ ಅವಕಾಶ, ವಿಕೇಂದ್ರೀಕರಣ ಮೊದಲಾದ ಹಲವು ವಿಚಾರಗಳಿಗೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಉತ್ತಮ ಆಯ್ಕೆ ಎಂದು ಅಂಬೇಡ್ಕರ್ ನಂಬಿದ್ದರು. ಆರ್ಥಿಕ ಅಭಿವೃದ್ಧಿ, ಕೈಗಾರಿಕೀಕರಣ, ರಾಜಕೀಯ ಭಾಗವಹಿಸುವಿಕೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ ಹಾಗೂ ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು, ಯೋಚಿಸಿದ್ದನ್ನು ಸಂವಿಧಾನದಲ್ಲಿ ಅಡಕಗೊಳಿಸಿದರು ಎಂದು ತಿಳಿಸಿದರು. ಉಪ ತಹಸೀಲ್ದಾರ್‌ಗಳಾದ ರವಿಕಿರಣ್, ದೇವಕಿ, ತಾಲೂಕು ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.