ಜಿಲ್ಲೆ

ಅಂಬೇಡ್ಕರ್ ವಿಚಾರಧಾರೆ ಜಗತ್ತಿನ ಹಲವೆಡೆ ಪ್ರಭಾವಬೀರಿವೆ: ಡಾ.ಬಿ.ರಾಘವ

ಮಡಿಕೇರಿ: ಅಂಬೇಡ್ಕರ್ ವಿಚಾರಧಾರೆ ಜಗತ್ತಿನ ಹಲವೆಡೆ ಪ್ರಭಾವಬೀರಿವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಭಾರತದ ಸಂವಿಧಾನದ ಶಿಲ್ಪಿ, ಸಮಾಜ ಪರಿವರ್ತಕ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರಜ್ಞಾವಂತ ಭಾಷಣದಿಂದ ಕಾರ್ಯಕ್ರಮ ಸಾರ್ಥಕ ಹೊಂದಿದೆ. ಇದಕ್ಕೆ ಭಾರತರತ್ನ ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದ ಅವರು, ಅಂಬೇಡ್ಕರ್ ಅವರ ಗುರಿಮುಟ್ಟುವ ಇಚ್ಚಾಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಕೊಡುಗೆ ನೀಡಿದ ಸಂವಿಧಾನದ ಆಶಯದಂತೆ ಸಮುದಾಯದ ಬೆಳವಣಿಗೆಗೆ ಮಹಿಳೆಯರೂ ಸೇರಿದಂತೆ ಎಲ್ಲರೂ ಅಭಿವೃದ್ಧಿ ಹೊಂದಬೇಕೆಂದರು.

ಗಣಿತ ವಿಭಾಗದ ಮುಖ್ಯಸ್ಥ ಡಾ.ಆರ್.ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣದ ರಾಯಭಾರಿ ಅವರ ಬರಹಗಳು ಮತ್ತು ಪುಸ್ತಕಗಳನ್ನು ಓದುವುದರ ಮೂಲಕ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗಣಕ ಶಾಸ್ತ್ರವಿಭಾಗದ ಮುಖ್ಯಸ್ಥ ಪ್ರೊ. ಎಂ.ಎನ್.ರವಿಶಂಕರ್ ಮಾತನಾಡಿ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶಿಕ್ಷಣವೇ ಅಸ್ತ್ರ ಎಂಬುದನ್ನು ಅಂಬೇಡ್ಕರ್ ಅವರು ನಿರೂಪಿಸಿದ್ದಾರೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ವಿ.ಮಹೇಂದ್ರ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿವೆ. ಅವುಗಳನ್ನು ತೊಡೆದು ಹಾಕಲು ಸಂವಿಧಾನದ ಮೂಲ ಆಶಯವನ್ನು ಸಾಕಾರಗೊಳಿಸಲು ನಾವು ಬದಾಲಾಗಿ ಎಲ್ಲರನ್ನೂ ಬದಲಾಯಿಸಬೇಕೆಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್ ನಾಯಕ ಮನೋಜ್ ಮಾತನಾಡಿ, ಜೀತ ಪದ್ಧತಿ ಮತ್ತು ಶೋಷಣೆ ಇನ್ನೂ ಸಮಾಜದಲ್ಲಿದೆ. ಇದನ್ನು ತೊಡೆದು ಹಾಕಬೇಕಿದೆ. ಭಾರತರತ್ನ ಅಂಬೇಡ್ಕರ್ ಅವರು ಎಲ್ಲಾ ಜನಾಂಗಗಳಿಗೆ ಉಪಯೋಗವಾಗಿರುವ ಕಾರ್ಯಮಾಡಿದ ಮಹಾನಾಯಕರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಯಿತು. ಎನ್‌ಸಿಸಿ ನಾಯಕ ಮೋನಿಶ್ ಮತ್ತು ಗಣಶೇಖರ್, ಹಿಂದಿ ಉಪನ್ಯಾಸಕಿ ಕುರ್ಶಿದ್‌ಬಾನು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿದ್ದರು.