ಲಿಂಗದಹಳ್ಳಿ: ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರಪಂಚದ ಅನೇಕ ರಾಷ್ಟ್ರಗಳ ಸಂವಿಧಾನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಭಾರತ ದೇಶಕ್ಕೆ ಸೂಕ್ತ ಸಂವಿಧಾನ ರಚಿಸಿರುವುದರಿಂದ ದೇಶದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಹೇಳಿದರು.
ತಣಿಗೆಬೈಲಿನ ಶ್ರೀ ಚೌಡೇಶ್ವರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಸಂವಿಧಾನ ಜಾಗೃತಿ ಮತ್ತು ಬಿ.ಆರ್.ಅಂಬೇಡ್ಕರ್ ರವರ ವಿಚಾರಧಾರೆಗಳ ಕುರಿತು ನಡೆದ ಬೀದಿ ನಾಟಕವನ್ನು ಉದ್ಘಾಟಿಸಿ ಮಾತನಾಡಿ, 300ವರ್ಷ ಪರಕೀಯ ಅಳ್ವಿಕೆಯಿಂದ ನಲುಗಿದ್ದ ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನವ ಚೈತನ್ಯ ನೀಡಿದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರಿಯಬೇಕು ಎಂದು ಹೇಳಿದರು.
ಬಗರ್‌ಹುಕುಂ ಸಮಿತಿ ಸದಸ್ಯರಾದ ಮಹಮ್ಮದ್ ಅಕ್ಬರ್, ಚೌಡೇಶ್ವರಿ ಪ್ರೌಢಶಾಲಾ ಮುಖ್ಯಶಿಕ್ಷಕ ಸಿ.ಕುಮಾರ್, ಸಹ ಶಿಕ್ಷಕರಾದ ನಾಗರಾಜನಾಯ್ಕ, ಪಾರ್ವತಮ್ಮ, ದೊಡ್ಡ ಮಲ್ಲಯ್ಯ, ಸಿದ್ದೇಶ್ ಇದ್ದರು.