ಜಿಲ್ಲೆ

ಅಂಬೇಡ್ಕರ್ ಸಮಗ್ರ ಚಿಂತನೆ ಮರುಮಂಥನ ನಡೆಯಲಿ: ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶಯ

ಮೈಸೂರು: ಅಂಬೇಡ್ಕರ್ ಅವರ ವಿಚಾರ, ಪ್ರಸ್ತುತತೆಯನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕಿದೆ ಎಂದು ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.


ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಭಾರತ ಸ್ವಾತಂತ್ರೃವಾದರಷ್ಟೇ ಸಾಲದು, ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ದೇಶದ ನಿವಾಸಿಗಳು ಸಮಾನ ಹಕ್ಕುದಾರರಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಅವರು ರಚಿಸಿದ ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರ ದೇಶಗಳೂ ಅನುಕರಿಸುತ್ತಿವೆ ಎಂದರು.


ಜಾತ್ಯತೀತ ಮೌಲ್ಯ ಆಧಾರಿತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳವಳಿಯ ವಿಸ್ತಾರವನ್ನು ಪಡೆಯಲು ಅವರ ಸಮಗ್ರ ಚಿಂತನೆಯ ಮರುಮಂಥನ ನಡೆಯಬೇಕಿದೆ ಎಂದು ತಿಳಿಸಿದರು.


ಸಮಸಮಾಜ ನಿರ್ಮಾತೃಗಳಾಗಲು ನಾವು ಪರಿಣಾಮಕಾರಿ ಪರಿವರ್ತನವಾದಿಗಳಾಗಬೇಕು ಎಂದು ತಿಳಿಸಿದರು.


ಅಂಬೇಡ್ಕರ್ ಪರಿಪಕ್ವ ಪರಿಪೂರ್ಣ ಚಿಂತಕರು. ಅವರು ಕಾನೂನು ತಜ್ಞರು, ರಾಜಕೀಯ ನೇತಾರರು, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರು, ಶ್ರೇಷ್ಠ ಇತಿಹಾಸಕಾರರು, ಮಹಾದಾರ್ಶನಿಕರು, ಅಪ್ರತಿಮ ಚಿಂತಕರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು. ಅವರು ಆಧುನಿಕ ಭಾರತ ಬಹುಮುಖ ಪ್ರತಿಭೆಯಾಗಿದ್ದರು. ಅವರ ಬಹುಮುಖಿ ಪ್ರತಿಭೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.


ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ಉದ್ಯಮಿ ದಾಸಣ್ಣ, ಸಂಘದ ಕಾರ್ಯದರ್ಶಿ ಮಲ್ಲಣ್ಣ, ಸಂಘಟನಾ ಕಾರ್ಯದರ್ಶಿ ಬಿ.ಮಾದಪ್ಪ, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಎಂ.ಸ್ವಾಮಿ, ರಾಮಸ್ವಾಮಿ, ರಾಮಲಿಂಗ, ಸೋಮಣ್ಣ, ಕಂದಸ್ವಾಮಿ, ನಾಗರಾಜು, ಬಸಪ್ಪ, ವಿಜಯ್ ಕುಮಾರ್ ಇತರರು ಇದ್ದರು.