ರಬಕವಿ/ಬನಹಟ್ಟಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಿ ಸದೃಢ ಭಾರತ ನಿರ್ಮಿಸುವಲ್ಲಿ ಅಂಬೇಡ್ಕರ್ ಮೂಲ ಕಾರಣಕರ್ತರು ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ರ 134ನೇ ಜಯಂತಿ ಹಾಗು ಡಾ. ಬಾಬು ಜಗಜೀವನರಾಂರ 118ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಕಾನೂನು ಬಡವ-ಬಲ್ಲಿದನಿಗೂ ಸಮಾನವಾಗಿದ್ದು, ಸಂವಿಧಾನ ಎಲ್ಲರ ರಕ್ಷಣೆ ಮಾಡುತ್ತಿದೆ. ಸದೃಢ ದೇಶಕ್ಕೆ ಕಾನೂನು ಎಷ್ಟರಮಟ್ಟಿಗೆ ಕಾರಣವಾಗುತ್ತದೆ ಎಂಬ ಪರಿಕಲ್ಪನೆಯನ್ನು ಹಿಂದೆಯೇ ಹಾಕಿಕೊಟ್ಟ ಅಂಬೇಡ್ಕರ್ ಮಹಾಜ್ಞಾನಿಯಾಗಿದ್ದಾರೆ. ಇಂದಿಗೂ ಅವರು ರಚಿಸಿದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿದ್ದು ದೇಶದ ಸಾರ್ವಭೌಮತ್ವವನ್ನು ಕಾಪಾಡುತ್ತಿವೆ. ಮುಖ್ಯವಾಗಿ ಅವರು ನೀಡಿದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಪಾಲಿಸುತ್ತಿರುವುದರಿಂದಲೇ ದೇಶದಲ್ಲಿ ಶಾಂತಿ ನೆಲಸಲಿದೆ ಎಂದರು.
ನಗರ ಸಭೆ ಅಧ್ಯಕ್ಷೆ ವಿದ್ಯಾ ದಭಾಡಿ ಮಾತನಾಡಿ, ಸಾಮಾಜಿಕ ತಾರತಮ್ಯ ನಿರ್ಮೂಲನೆಯೊಂದಿಗೆ ಕಾನೂನಿನ ದೃಷ್ಟಿಯಲ್ಲಿ ಭಾರತದ ಎಲ್ಲ ನಾಗರಿಕರಿಗೆ ಸಮಾನತೆ ಪ್ರತಿಪಾದಿಸಿ ಶೋಶಿತ ವರ್ಗದ ಹಕ್ಕುಗಳಿಗೆ ಹೋರಾಡುತ್ತ ತಮ್ಮ ಜೀವನವನ್ನು ಕಳೆದ ಅಂಬೇಡ್ಕರ್ ಜಯಂತಿಯನ್ನು ಸಮಾನತೆ ದಿನವೆಂದೂ ಕರೆಯಲಾಗುತ್ತದೆ ಎಂದರು.
ಡಾ. ಸಾವಕಾರ ಕಾಂಬಳೆ ಹಾಗು ಡಾ. ಸದಾಶಿವ ದೊಡಮನಿಯವರು ಡಾ. ಅಂಬೇಡ್ಕರ್ ಹಾಗು ಡಾ. ಬಾಬು ಜಗಜೀವನರಾಂರ ಕುರಿತು ಉಪನ್ಯಾಸ ನಡೆಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ದೀಪಾ ಗಾಡಿವಡ್ಡರ, ತಹಸೀಲ್ದಾರ್ ಗಿರೀಶ ಸ್ವಾದಿ, ಪೌರಾಯುಕ್ತ ಜಗದೀಶ ಈಟಿ, ಜಗದೇವ ಪಾಸೋಡಿ, ಮಹಾದೇವ ಹನಗಂಡಿ, ಚಂದ್ರು ಹರಿಜನ, ಬಾಬು ಕೆಳಗಿನಮನಿ ಮತ್ತಿತರರಿದ್ದಾರೆ.