ರಾಯಚೂರು: ಅಂಬೇಡ್ಕರ್‌ರನ್ನು ಕೇವಲ ಸಂವಿಧಾನ ಶಿಲ್ಪಿಯೆಂದು ಸಿಮೀತಗೊಳಿಸಬಾರದು. ಅವರ ಸಾಧನೆ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ. ಅವರ ಸಾಧನೆಯನ್ನು ತಲುಪಲು ಆಗುವುದಿಲ್ಲ. ಪ್ರಯತ್ನ ಮಾಡಬೇಕಷ್ಟೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ ಕೇವಲ ವ್ಯಕ್ತಿಯಾಗಿರಲಿಲ್ಲ ಇತರರಿಗೆ ಪ್ರೇರಣೆಯಾಗಿದ್ದರು ಎಂದರು.
ಸಂವಿಧಾನ ರಚಿಸುವಲ್ಲಿ ಅಂಬೇಡ್ಕರರ ಸುದೀರ್ಘ ಪರಿಶ್ರಮವಿದೆ. ಆ ಕಾರಣಕ್ಕಾಗಿ ಸಂಘಟನೆ, ಹೋರಾಟದ ಸಂದೇಶವನ್ನು ನೀಡಿದ್ದಾರೆ. ಸಂವಿಧಾನ ರಚಿಸುವ ಮುನ್ನವೇ ಶೋಷಿತರನ್ನು ಸಂಘಟಿಸಿ ಶಿಕ್ಷಣ ನೀಡುವ ಮೂಲಕ ಹಕ್ಕು ಕೇಳುವಂತೆ ಮಾಡಿದ್ದರು ಎಂದು ಹೇಳಿದರು.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಬಾಲ್ಯದಲ್ಲಿಯೇ ಪಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದ ಅಂಬೇಡ್ಕರ್ ಇಂದಿನ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ಗಾಂೀಜಿ ಹೋರಾಟ ಮಾಡಿದರೆ, ದೇಶಕ್ಕೆ ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಅಡಿಗಲ್ಲು ಹಾಕಿದ್ದು ಅಂಬೇಡ್ಕರ ಎಂದು ತಿಳಿಸಿದರು.
ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಕಾರಿಗಳು ಹಾಗೂ ಮುಖಂಡರಿಂದ ಮಾಲಾರ್ಪಣೆ ಮಾಡಲಾಯಿತು.
ಬೀದರ್‌ನ ಬುದ್ಧವಿಹಾರದ ಬಂತೇಜಿ ಧಮ್ಮದೀಪ ದೇವನಾಂಪ್ರಿಯ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಸಕ ಮಹೇಶ ಪೋತದಾರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಕಾರಿ ರಾಜೇಂದ್ರ ಜಲ್ದಾರ್, ಡಿಡಿಪಿಐ ಕೆ.ಡಿ.ಬಡಿಗೇರ ಉಪಸ್ಥಿತರಿದ್ದರು.