ಜಿಲ್ಲೆ

ಜನರಿಗೆ ನೆಮ್ಮದಿಯ ಬದುಕು ನೀಡಿದ ಅಂಬೇಡ್ಕರ್: ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಭಾರ ನಿರ್ದೇಶಕ ಕೆ.ಎಂ.ಸುರೇಶ್‌ಕುಮಾರ್ ಬಣ್ಣನೆ

ಮೈಸೂರು: ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ ನ್ಯಾಯ, ಸಮಾನತೆ, ಹಕ್ಕುಗಳು ಮತ್ತು ಸ್ವಾತಂತ್ರ್ಯ ನೀಡಿ ಜನರು ನೆಮ್ಮದಿಯಾಗಿರುವಂತೆ ಮಾಡಿದ ಆಧುನಿಕ ಭಾರತದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಭಾರ ನಿರ್ದೇಶಕ ಕೆ.ಎಂ.ಸುರೇಶ್‌ಕುಮಾರ್ ಬಣ್ಣಿಸಿದರು.
ನಜರ್‌ಬಾದ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಚೆನ್ನಾಗಿ ಓದಿದ್ದರಿಂದಲೇ 21ನೇ ಶತಮಾನದಲ್ಲಿ ಜ್ಞಾನದ ಸಂಕೇತವಾಗಿ ವಿಶ್ವಜ್ಞಾನಿ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಂವಿಧಾನದ ಮಹತ್ವವನ್ನು ತಿಳಿಸಿಕೊಟ್ಟಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಗುಣಾತ್ಮಕವಾದ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ದಿನಕ್ಕೆ 18ಗಂಟೆ ಓದುತ್ತಿದ್ದರು. ನೀವು ಸಹ ಇದನ್ನು ರೂಢಿಸಿಕೊಳ್ಳುವುದರೊಂದಿಗೆ ಅವರ ಜೀವನ ಶೈಲಿಯನ್ನು ಅಂತರಂಗದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜಪಮಾಡಿದರೆ ಆಗುವುದಿಲ್ಲ. ಗುರಿ ಇಟ್ಟುಕೊಂಡು ಶ್ರಮದಿಂದ ಸಾಧನೆ ಮಾಡಬೇಕು. ಗ್ರಾಮೀಣ ಭಾಗದಿಂದ ಬಂದಿರುವ ನೀವು ಪಟ್ಟಣದ ಮಕ್ಕಳಿಗಿಂತ ಕಡಿಮೆಯೇನಿಲ್ಲ. ಸಮಯವನ್ನು ವ್ಯರ್ಥ ಮಾಡಬೇಡಿ. ಸಂವಿಧಾನ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂದು ಚಿಂತನೆ ಮಾಡಿ ಚೆನ್ನಾಗಿ ಓದಿ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಎಂದರು.
ಹಿಂದೆ ವಿದ್ಯಾರ್ಥಿನಿಲಯಗಳಿಗೆ ಹೆಚ್ಚಿನ ಸೌಲಭ್ಯ ಇರಲಿಲ್ಲ. ಆದರೆ ಈಗ ಸರ್ಕಾರ ಎಲ್ಲ್ಲ ಸೌಲಭ್ಯಗಳನ್ನು ನೀಡಿದೆ. ಆದ್ದರಿಂದ ವಿದ್ಯಾರ್ಥಿಗಳು ಬೇರೆ ವಿಚಾರಗಳನ್ನು ಬಿಟ್ಟು ಚೆನ್ನಾಗಿ ಓದಬೇಕು. ಈ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿದ್ದಲಿಂಗು, ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್, ನಿಲಯ ಪಾಲಕರಾದ ಮಹಂತೇಶ್ ಮಾಟೋಳಿ, ಎಸ್.ಜಿ. ಮಹೇಶ್, ಸುಧಾ ಇತರರು ಇದ್ದರು.