ಪಿರಿಯಾಪಟ್ಟಣ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಒಂದು ಮಹಾನ್ ಶಕ್ತಿ ಮತ್ತು ಸಮ ಸಮಾಜದ ನಿರ್ಮಾರ್ತೃ ಎಂದು ಅಂಬೇಡ್ಕರ್ ವಸತಿ ಶಾಲೆಯ ಉಪನ್ಯಾಸಕ ಪುಟ್ಟಮಾದಯ್ಯ ತಿಳಿಸಿದರು.
ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಿದ್ದು, ತಮ್ಮ ಅವಿರತ ಪರಿಶ್ರಮದ ಮೂಲಕ ಸಾರ್ವಕಾಲಿಕ ಸಂವಿಧಾನವನ್ನು ನೀಡಿ ಶ್ರೇಷ್ಠರಾಗಿದ್ದಾರೆ ಎಂದರು.
ದೇಶಕ್ಕೆ ಸಂವಿಧಾನವನ್ನು ರೂಪಿಸುವುದರ ಮೂಲಕ ಪ್ರತಿ ಸಮುದಾಯಕ್ಕೂ ಹಕ್ಕು ಮತ್ತು ಸ್ವತಂತ್ರವನ್ನು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಸಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶೋಷಿತ ಸಮುದಾಯದಲ್ಲಿ ಜನಿಸಿದ ಇವರು ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ, ನಿರುದ್ಯೋಗ, ಬಡತನವನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದ್ದಾರೆ. ಇವರು ಕೇವಲ ವ್ಯಕ್ತಿಯಲ್ಲ. ಪ್ರತಿಯೊಬ್ಬರಿಗೂ ಶಕ್ತಿಯಾಗಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವುದರ ಮೂಲಕ ಸಂವಿಧಾನದ ಅವಕಾಶಗಳನ್ನು ಪಡೆಯದಂತೆ ವ್ಯವಸ್ಥಿತವಾಗಿ ಹುನ್ನಾರ ನಡೆಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಡಾ.ಸೋಮಣ್ಣ ಮಾತನಾಡಿ, ಜಾತಿ ಪದ್ಧತಿ ವಿರುದ್ಧ ಮತ್ತು ಸಮಾಜದಲ್ಲಿ ಇರುವ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಹೋರಾಟ ಮಾಡಿದ ಅಂಬೇಡ್ಕರ್ ಅವರ ಆದರ್ಶ, ತತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ದೇಶದ ಉದ್ಧಾರಕ್ಕಾಗಿ ಮತ್ತು ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಈ ದೇಶಕ್ಕೆ ಬೃಹತ್ ಸಂವಿಧಾನವನ್ನು ಅಂಬೇಡ್ಕರ್ ನಮಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಮಹಾದೇವ್, ಎಚ್.ಡಿ.ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪುಟ್ಟರಾಜು ಮಾತನಾಡಿದರು. ಪಂಚವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ, ಮೂಲ ನಿವಾಸಿ ಅಂಬೇಡ್ಕರ್ ಸಂಘದ ಜಿಲ್ಲಾ ಸಂಚಾಲಕ ಚನ್ನಬಸವಣ್ಣ, ಮುಖಂಡರಾದ ಸುಂದ್ರಯ್ಯ, ಕರಿಯಯ್ಯ, ನಟರಾಜ್, ರವೀಂದ್ರ, ರಾಜಮ್ಮ, ಸಣ್ಣಯ್ಯ, ರಮೇಶ್, ಬಸವರಾಜ್, ಚನ್ನಬಸವಯ್ಯ ಪಿ.ರವಿ, ಎಸ್.ಆರ್.ಸತೀಶ್, ಪ್ರಭಾಕರ್, ಎಸ್.ಕೆ.ಸುನಿಲ್, ಪ್ರೇಮ್, ಸಂತೋಷ್, ವಿಜಯ್, ಶಿವರಾಜ್ ಸಣ್ಣಯ್ಯ ಮತ್ತಿತರರು ಹಾಜರಿದ್ದರು.