ತರೀಕೆರೆ: ಅಂಬೇಡ್ಕರ್ ಕನ್ನಡ ನೆಲದಲ್ಲಿ ಹುಟ್ಟಿದ್ದರೆ ಜಗಜ್ಯೋತಿ ಬಸವಣ್ಣ ಅವರ
ಅನುಯಾಯಿಯಾಗುತ್ತಿದ್ದರು ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ
ಪ್ರೋ. ಶುಭಾ ಮರವಂತೆ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ
ಪರಿಷತ್, ದಲಿತ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ
ಇನ್ನರ್‌ವ್ಹೀಲ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್
ಮತ್ತು ಕನ್ನಡದ ಮೊದಲ ಕವಯತ್ರಿ ಶರಣೆ ಅಕ್ಕಮಹಾದೇವಿ ಅವರ ಸಂಸ್ಮರಣೆ
ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಅಂಬೇಡ್ಕರ್ ಹುಡುಕಾಟ ಎಂಬ ವಿಷಯ ಕುರಿತು
ಉಪನ್ಯಾಸ ನೀಡಿದರು.
ಈ ರೀತಿಯ ಚಿಂತನೆಗಳಿಂದಲೇ ಬಸವಣ್ಣನವರ ಮುಂದಿನ ಜನ್ಮ ಅಂಬೇಡ್ಕರ್
ರೂಪದಲ್ಲಿದೆ ಎಂಬ ವಿಶ್ವಾಸ ಮೂಡುತ್ತದೆ. ಕಾಳಾರಾಂ ದೇಗುಲ ಪ್ರವೇಶಿಸಿ ಜಾತಿ ವ್ಯವಸ್ಥೆಗೆ
ಸೆಡ್ಡು ಹೊಡೆದಿದ್ದ ಅಂಬೇಡ್ಕರ್ ಶರಣರು ದೇವರ ಅಸ್ತಿತ್ವ ಪ್ರಶ್ನಿಸಿದಂತೆ ಅವರು ಕೂಡ
ದೇವರ ಅಸ್ತಿತ್ವವನ್ನು ಪ್ರಶ್ನಿಸಿದ್ದರು. ದೇಶ ಅಂಬೇಡ್ಕರ್ ಜನಿಸಿದ ಕಾರಣದಿಂದಲೇ
ಜೀವಂತವಾಗಿದೆ ಎಂದರು.
ವರದಿಗಾರ್ತಿ ಎಸ್.ಜಿ.ಗೀತಾ ಅಕ್ಕ ಮಹಾದೇವಿ ವಚನಗಳಲ್ಲಿ ಸೀತ್ವದ ತಲ್ಲಣಗಳು ಮತ್ತು
ಸಮಾನತೆ ಆಶಯಗಳು ಕುರಿತು ಉಪನ್ಯಾಸ ನೀಡಿ, ಅಕ್ಕ ಮಹಾದೇವಿ ರಾಜಪ್ರಭುತ್ವ
ಧಿಕ್ಕರಿಸುವ ಮೂಲಕ ಮಹಿಳಾ ಶೋಷಣೆಯನ್ನು ಖಂಡಿಸಿದರು. ಜಗತ್ತಿನ ಮೊದಲ ಮಹಿಳಾ
ಧ್ವನಿಯಾಗಿ ಅಂಗಭಾವ ತೊರೆದು ಲಿಂಗಭಾವ ತೊಟ್ಟ ಅಕ್ಕ ಮಹಾದೇವಿ ತಮ್ಮ ವಚನಗಳ
ಮೂಲಕ ಬಂಡಾಯದ ಕೂಗು ಸೃಷ್ಟಿಸಿದ್ದರು ಎಂದು ವಿವರಿಸಿದರು.
ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ದಾದಾಪೀರ್, ದಲಿತ
ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಪ್ಪ, ಇನ್ನರ್‌ವ್ಹೀಲ್ ಅಧ್ಯಕ್ಷೆ ಉಮಾ, ಕದಳಿ ವೇದಿಕೆ ಅಧ್ಯಕ್ಷೆ
ಮಮತಾ, ಗಾಯಕರಾದ ಬಿ.ಎಸ್.ಭಗವಾನ್, ಭಕ್ತನಕಟ್ಟೆ ಲೋಕೇಶ್, ಪ್ರಮುಖರಾದ
ಚೇತನ್, ಮಹೇಂದ್ರಸ್ವಾಮಿ ಮತ್ತಿತರರಿದ್ದರು.