ಮಂಡ್ಯ: ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದ ಜನರ ಸಮಸ್ಯೆ ಮತ್ತು ಪರಿಹಾರಗಳ ಸಂಬಂಧ ಚರ್ಚಿಸಲು ನ.19ರಂದು ನಗರದಲ್ಲಿ ಜಿಲ್ಲಾಮಟ್ಟದ ಮೂಲ ಭಾರತೀಯರ ಪ್ರಥಮ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗರಾಜ್ ಹನಕೆರೆ ತಿಳಿಸಿದರು.
ಅಂದು ಬೆಳಗ್ಗೆ 11ಗಂಟೆಗೆ ಪ್ರವಾಸಿ ಮಂದಿರದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಕಾಲಭೈರೇಶ್ವರ ದೇವಸ್ಥಾನಕ್ಕೆ ದಲಿತ ಸಮುದಾಯದವರ ಪ್ರವೇಶ ಕಾರ್ಯಕ್ರಮದ ಸಂಬಂಧ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಲವರಿಂದ ಈ ಘಟನೆ ನಡೆದಿದ್ದು, ಸವರ್ಣೀಯರೊಂದಿಗೆ ಯಾವುದೇ ಘರ್ಷಣೆ ನಡೆದಿಲ್ಲ. ಈ ನಿಟ್ಟಿನಲ್ಲಿ ಬುದ್ಧ ಸಂದೇಶ ಸಾರುವ ಹಿನ್ನಲೆ ಭಾರತೀಯರ ನಡೆ, ಬುದ್ದನ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಅಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗುವುದು. ಜತೆಗೆ ಮಂಡ್ಯ ನಗರದ ಅಂಬೇಡ್ಕರ್ ಪುತ್ತಳಿಯಿಂದ ಹನಕೆರೆವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ವಿವರಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಉಪಾಧ್ಯಕ್ಷ ವೆಂಕಟಗಿರಿಯಯ್ಯ, ಹನಕೆರೆ ಗ್ರಾಮದ ಮುಖಂಡ ಶಶಿಕುಮಾರ್, ಸ್ವಾಭಿಮಾನಿ ಸಮಾಜದ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಟಿಪ್ಪು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಮ್ಜದ್ ಪಾಷ, ವಕೀಲ ಜೆ.ರಾಮಯ್ಯ, ಮೋಹನ್, ದೇವಯ್ಯ ಇದ್ದರು.