ಶಿರಸಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶಿಕ್ಷಣ ನೀಡುವ ಸಲುವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಡೊಂಬೇಸರದ ಡಾ.ಬಿ.ಆರ್. ಅಂಬೇಡ್ಕರ್ ಶಾಲೆಯ ಬಾಡಿಗೆ ಕಟ್ಟಡ ದುರ್ಬಲವಾಗಿದೆ. ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲು ಜಾಗವೂ ಲಭ್ಯವಾಗದೇ ಸಮಸ್ಯೆಯಾಗಿದೆ.
ದಶಕದ ಹಿಂದೆ ಈ ಶಾಲೆ ಮಂಜೂರಾದಾಗ ತುರ್ತಾಗಿ ಡೊಂಬೆಸರದಲ್ಲಿ ಬಾಡಿಗೆ ಕಟ್ಟಡ ಗುರುತಿಸಿ ಶಾಲೆ ಆರಂಭಿಸಲಾಗಿತ್ತು. ವಾರ್ಷಿಕ ನಾಲ್ಕು ಲಕ್ಷ ರೂ. ಬಾಡಿಗೆ ನೀಡಲಾಗುತ್ತದೆ. ಆ ಬಳಿಕ ಸ್ವಂತ ಕಟ್ಟಡದ ಬಗ್ಗೆ ಯತ್ನಗಳು ನಡೆದಿದ್ದರೂ ಈ ಭಾಗದಲ್ಲಿ ಅಗತ್ಯ ಪ್ರಮಾಣದ ಜಾಗ ಲಭ್ಯವಾಗದೇ ಈ ಯತ್ನಕ್ಕೆ ಹಿನ್ನಡೆ ಉಂಟಾಗಿದೆ.
‘ಬಾಡಿಗೆ ಕಟ್ಟಡ ಸರಿಯಾಗಿ ನಿರ್ವಹಣೆಯಿಲ್ಲ. ಶೌಚಗೃಹ ಸಮಸ್ಯೆಯೂ ಇದೆ. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಬೇಂಚ್ ಸಹ ಇಲ್ಲ. ಮಳೆಗಾಲದಲ್ಲಿ ಮೇಲ್ಛಾವಣಿ ಸೋರುವುದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಇದೇ ಕಟ್ಟಡ ಸಂಕೀರ್ಣದಲ್ಲಿ ವಸತಿಯೂ ಇರುವುದರಿಂದ ಇನ್ನಷ್ಟು ತೊಂದರೆ. ಆದಷ್ಟು ಬೇಗ ಬೇರೆಲ್ಲಾದರೂ ಬಾಡಿಗೆ ಕಟ್ಟಡ ಪಡೆದು ಸ್ಥಳಾಂತರಗೊಳ್ಳುವ ಕೆಲಸ ಆಗಬೇಕು’ ಎನ್ನುತ್ತಾರೆ ಮಕ್ಕಳ ಪಾಲಕರು.
ಈ ಹಿಂದೆ ತಾಲೂಕಿನ ಹುಲೇಕಲ್ ಬಳಿ ಜಾಗ ಗುರುತಿಸಲಾಗಿತ್ತು. ಆದರೆ, ಅಲ್ಲಿ ಶಾಲೆಗೆ ಬೇಕಾದಷ್ಟು ಜಾಗ ಇರದ ಕಾರಣ ಜಾಗ ಗುರುತಿಸುವಿಕೆ ಮುಂದುವರಿದಿಲ್ಲ. ಸದ್ಯ ಸ್ವಂತ ಕಟ್ಟಡಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ, ಇರುವ ಬಾಡಿಗೆ ಕಟ್ಟಡ ದುರ್ಬಲವಾಗಿರುವ ಕಾರಣ ಬೇರೆಡೆ ಬಾಡಿಗೆ ಕಟ್ಟಡವನ್ನು ಹುಡುಕುವುದು ಅನಿವಾರ್ಯ. ಹೀಗಾಗಿ ನಗರ ಪ್ರದೇಶದಲ್ಲಿ ಸೂಕ್ತ ಬಾಡಿಗೆ ಕಟ್ಟಡ ಹುಡುಕಲಾಗುತ್ತಿದೆ. | ಗಿರಿಜಾ, ಶಾಲೆ ಮುಖ್ಯ ಶಿಕ್ಷಕಿ ವಸತಿ ಶಾಲೆಯ ಸ್ಥಿತಿ-ಗತಿ ಬಗ್ಗೆ ಸ್ಥಳ ಭೇಟಿ ಮಾಡಿ ಪರಿಶೀಲಿಸಿದ್ದೇನೆ. ಸ್ವಂತ ಕಟ್ಟಡ ಆಗುವವರೆಗೆ ನಗರದಲ್ಲಿಯೇ ಬಾಡಿಗೆ ಕಟ್ಟಡ ಹುಡುಕಿ ಶಾಲೆ ಸ್ಥಳಾಂತರಿಸಲು ಸೂಚಿಸಿದ್ದೇನೆ. | ಭೀಮಣ್ಣ ನಾಯ್ಕ, ಶಾಸಕ