ಜಿಲ್ಲೆ

ಅಂಬೇಡ್ಕರ್​ ಪುತ್ಥಳಿ ಸ್ಥಾಪನೆ ವಿವಾದ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ತಾಲೂಕಿನ ತಾಡಿಗೋಳ್​ ಕ್ರಾಸ್​ ಬಳಿ ರಾತ್ರೋರಾತ್ರಿ ಗ್ರಾಮದ ಯುವಕರ ತಂಡ ರಸ್ತೆ ಡಿವೈಡರ್​ನಲ್ಲಿ ಅಂಬೇಡ್ಕರ್​ ಪುತ್ಥಳಿ ಇಟ್ಟ ಕಾರಣ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. 2 ಗಂಟೆಯಲ್ಲಿ ನೂರಾರು ವಿವಿಧ ಸಂಘಟನೆಗಳ ದಲಿತ ಮುಖಂಡರು ಸ್ಥಳದಲ್ಲಿ ಜಮಾಯಿಸಿದ್ದರು.

ನಗರದ ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ಮಾತನಾಡಿ, ಯಾವುದೇ ಅನುಮತಿ ಪಡೆಯದೇ ಅಂಬೇಡ್ಕರ್​ ಪುತ್ಥಳಿ ಸ್ಥಾಪನೆ ಮಾಡಿರುವುದು ಸರಿಯಲ್ಲ ಎಂದರು. ತಾಡಿಗೋಳ್​ ಗ್ರಾಮದ ಡಿ.ಎಂ.ಭಾಸ್ಕರ್​ ಮತ್ತು ಹರೀಶ್​ ಮಧ್ಯ ಪ್ರವೇಶಿಸಿ, ತಾಲೂಕಿನ ರೋಜೋರಪಲ್ಲಿ ಕ್ರಾಸ್​, ಪುಂಗನೂರು ಕ್ರಾಸ್​ನಲ್ಲಿ ಕೆಂಪೇಗೌಡ ಪುತ್ಥಳಿ ಯಾವುದೇ ಅನುಮತಿ ಪಡೆಯದೇ ಇಟ್ಟಿರುವುದು ಸರಿಯೇ ಎಂದು ತಹಸೀಲ್ದಾರ್​, ಗೌನಿಪಲ್ಲಿ ಸಿಪಿಐ ಶಿವಕುಮಾರ್​, ಶ್ರೀನಿವಾಸಪುರ ಸಿಪಿಐ ಎಂ.ಬಿ.ಗೊರವನಕೊಳ್ಳ ಅವರನ್ನು ಪ್ರಶ್ನಿಸಿದರು. ಪುತ್ಥಳಿ ತೆರವುಗೊಳಿಸುವುದಾದರೆ ಮೊದಲು ನಮ್ಮ ಪ್ರಾಣ ತೆಗೆಯಲಿ. ಪ್ರಾಣ ಹೋದರೂ ಈ ಸ್ಥಳದಿಂದ ಅಂಬೇಡ್ಕರ್​ ಪುತ್ಥಳಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೂಗಾಡಿದರು. ಒಂದು ವಾರದಲ್ಲಿ ಎಲ್ಲ ತಾಲೂಕು ಎಲ್ಲ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಎನ್​.ಸುಧೀಂದ್ರ ಮಾಹಿತಿ ನೀಡಿದರು.

ದಲಿತ ನಾಯಕಿ ರಾಮಾಜಮ್ಮ ಮಾತನಾಡಿ, ದೇಶವು ಅಂಬೇಡ್ಕರ್​ ರಚಿತ ಸಂವಿಧಾನದ ಮೇಲೆ ನಡೆಯುತ್ತಿದ್ದು. ಅವರನ್ನು ಗೌರವಿಸುವುದನ್ನು ಬಿಟ್ಟು ಪುತ್ಥಳಿ ತೆರವು ವಿಚಾರದಲ್ಲಿ ಇಲ್ಲ ಸಲ್ಲದ ಗಲಾಟೆ ತೆಗೆಯುವುದು ಸರಿಯಲ್ಲ. ಪುತ್ಥಳಿ ತೆರವುಗೊಳಿಸದಲ್ಲಿ ರಾಜ್ಯದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೃತ್ತವನ್ನು ಅಂಬೇಡ್ಕರ್​ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಸಿಪಿಐಗಳಾದ ಎಂ.ಬಿ.ಗೊರವನಕೊಳ್ಳ, ಶಿವಕುಮಾರ್​, ಗೌನಿಪಲ್ಲಿ ಪಿಎಸ್​ಐ ರಾಮು, ಕಂದಾಯ ಇಲಾಖೆ ಆರ್​ಐ ಜನಾರ್ಧನ್​, ವಿಎ ಪೃಥ್ವಿ, ಪಿಡಬ್ಲೂಡಿ ಇಲಾಖೆ ಎಇಇ ನಾರಾಯಣಸ್ವಾಮಿ, ಕಿರಿಯ ಅಭಯಂತರ ಗೋವಿಂದಪ್ಪ, ಡಿಎಸ್​ಎಸ್​ ಮುಖಂಡರಾದ ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಗಾಂಡ್ಲಹಳ್ಳಿ ಚಲಪತಿ, ವರ್ತನಹಳ್ಳಿ ವೆಂಕಟೇಶ್​, ನರಸಿಂಹಮೂರ್ತಿ, ಹೂವಳ್ಳಿ ಕೃಷ್ಣಪ್ಪ, ಕೊಸ್ಸಂದ್ರ ರೆಡ್ಡಪ್ಪ, ತಾಡಿಗೋಳ್​ ಅಬಿ ಇದ್ದರು.