ಜಿಲ್ಲೆ

ಸಮುದಾಯದ ಅಭಿವೃದ್ಧಿಗೆ ಜನಜಾಗೃತಿ: ಸೇವಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಸರ್ವತೋಮುಖ ಬೆಳವಣಿಗೆಯ ಹಿತದೃಷ್ಠಿಯಿಂದ ಪ್ರಗತಿಪರ ಚಿಂತಕರು, ಹೋರಾಟಗಾರರು, ಕಲಾವಿದರು, ಕಾನೂನು ಸಲಹೆಗಾರರೊಂದಿಗೆ ಸಮುದಾಯದ ಸಂಘ ಸಂಸ್ಥೆಗಳ ಮುಖಂಡರು ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಸಮುದಾಯದ ಅಭಿವೃದ್ಧಿಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ತಿಳಿಸಿದರು.

ಸಮುದಾಯದ ಅಭಿವೃದ್ಧಿ ಸಂಬಂಧ ಎಲ್ಲ ಜಿಲ್ಲೆಗಳಲ್ಲಿಯೂ ಸಭೆ ಮಾಡಲಾಗುತ್ತಿದೆ. 18 ಅಂಶಗಳ ನಿರಂತರ ಪಾಲನೆಗೆ ಸಮುದಾಯವು ಮುಂದಾಗುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಬಾಬು ಜಗಜೀವನರಾಮ್ ಹಾಗೂ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಹುಟ್ಟುಹಬ್ಬ ಮನೆ-ಮನದ ಹಬ್ಬವನ್ನಾಗಿ ಆಚರಿಸಿ. ಅಂಬೇಡ್ಕರ್ ಹಾಗೂ ಬಾಬೂಜಿ ಭವನವನ್ನು ಎಸ್ಸಿ/ಎಸ್ಟಿ ಸಮುದಾಯದ ಆಸ್ತಿಗಳನ್ನಾಗಿ ಮಾಡಲು ಸರ್ಕಾರ ಕ್ಯಾಬಿನೆಟ್‌ನಲ್ಲಿ ನಿರ್ಣಯಿಸಿ ನೋಂದಾಯಿತ ಸಂಘ ಸಂಸ್ಥೆಗಳಿಗೆ ನೀಡಲು ಆದೇಶಿಸಲು ಒತ್ತಾಯಿಸಬೇಕು. ಸಮುದಾಯಕ್ಕೆ ನಿಗದಿಪಡಿಸಿದ ಎಸ್ಸಿಎಸ್‌ಪಿ/ ಟಿಎಸ್‌ಪಿ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲು ಆಗ್ರಹಿಸಬೇಕೆಂದು ಹೇಳಿದರು.

ಸೋಮನಹಳ್ಳಿ ಅಂದಾನಿ, ನರಸಿಂಹಮೂರ್ತಿ, ಶಿವಶಂಕರ್, ಗುರುಶಂಕರ್, ಬಸವಯ್ಯ, ಲಕ್ಷ್ಮಣ್ ಚೀರನಹಳ್ಳಿ ಇತರರಿದ್ದರು.