ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಕಾರ್ಯಕಾರಿ ಸಮಿತಿಯ 5 ಪದಾಧಿಕಾರಿಗಳ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸೋಮವಾರ ಒಟ್ಟು 21 ನಾಮಪತ್ರ ಸಲ್ಲಿಕೆಗೊಂಡಿದೆ.
ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ ರಸ್ತೆಯಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಹಕಾರ ಇಲಾಖೆಯ ಚುನಾವಣಾಧಿಕಾರಿ ಎಸ್. ನಾಗೇಶ್ ನಾಮಪತ್ರ ಸ್ವೀಕರಿಸಿದರು.
ಏ.23 ರಂದು ಮಧ್ಯಾಹ್ನ 3 ಗಂಟೆಯೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ನಂತರದಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಪ್ರಕ್ರಿಯೆಯೊಂದಿಗೆ ಚುನಾವಣಾ ಅಂತಿಮ ಕಣದಲ್ಲಿ ಯರ‌್ಯಾರು ಉಳಿಯಲಿದ್ದಾರೆ ಎಂಬ ಉಮೇದುದಾರರ ಪಟ್ಟಿ ಪ್ರಕಟವಾಗಲಿದೆ.
ಚುನಾವಣೆ ಪ್ರಕ್ರಿಯೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ 432 ಮಂದಿ ದೃಢಿಕೃತ ಮತದಾರರ ಪಟ್ಟಿಯನ್ನು ಆಧರಿಸಿ ಚುನಾವಣೆ ನಡೆಯಲಿದ್ದು, ಏ.27 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಪಟ್ಟಣದ ಎಸ್.ಡಿ.ಎ ಶಾಲೆ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮತದಾನ ನಡೆಯಲಿದೆ.