ಕೆ.ಆರ್.ನಗರ: ಅಂಬೇಡ್ಕರ್ ಅವರಂತಹ ಹೋರಾಟಗಾರರಿಂದ ದೇಶದಲ್ಲಿ ನೊಂದವರು, ದಮನಿತರು, ಬಡವರು ಹಾಗೂ ಮಹಿಳೆಯರ ಬದುಕು ಹಸನಾಯಿತು ಎಂದು ಬುದ್ಧ, ಬಸವ, ಅಂಬೇಡ್ಕರ್ ಸಮನ್ವಯ ಸಮಿತಿ ಅಧ್ಯಕ್ಷ ಎಂ.ಜೆ.ರಾಜಶೇಖರ್ ಹೇಳಿದರು.
ಪಟ್ಟಣದ ಸಮಿತಿಯ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಧ್ವನಿಯಿಲ್ಲದವರ ಧ್ವನಿಯಾಗಿ ಶತಮಾನಗಳಿಂದ ಶೋಷಣೆಗೆ ಒಳಗಾಗಿ ನಿಕೃಷ್ಟ ಜೀವನ ನಡೆಸುತ್ತಿದ್ದ ನಮ್ಮ ಬಹುಜನರಿಗೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ಏನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಬಾಬಾ ಸಾಹೇಬರು ಎಂದರು.
ಬಡ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಸಮಾಜದಲ್ಲಿ ಶೋಷಣೆಗೆ ಒಳಗಾದರೂ ಕೂಡ ಎದೆಗುಂದದೆ ಛಲದಿಂದ ಹೋರಾಟದ ಮೂಲಕ ಉನ್ನತ ಶಿಕ್ಷಣವನ್ನು ಪಡೆದರು. ತಮ್ಮ ಅಪಾರ ಜ್ಞಾನದ ಮೂಲಕ ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿ ಸಂವಿಧಾನ ಶಿಲ್ಪಿಯಾದರಲ್ಲದೆ ಅವರ ವಿದ್ವತ್ತಿಗೆ ಈಡಿ ವಿಶ್ವವೇ ತಲೆ ಬಾಗಿತಲ್ಲದೆ ಅವರು ವಿಶ್ವಜ್ಞಾನಿ ಎನಿಸಿಕೊಂಡಿದ್ದಾರೆ ಎಂದರು.
ಅವರು ಬದುಕಿನುದ್ದಕ್ಕು ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ಅವಮಾನಗಳನ್ನು ನಾವು ಯಾರೂ ಅನುಭವಿಸುತ್ತಿಲ್ಲ. ಅದಕ್ಕೆ ಕಾರಣ ಅವರು ನೀಡಿದ ಕಾನೂನುಗಳ ರಕ್ಷಣೆ. ನಾನು ಅನುಭವಿಸಿದ ಕಷ್ಟನಷ್ಟಗಳನ್ನು ನಮ್ಮ ಜನ ಅನುಭವಿಸಬಾರದು. ಅವರು ಸಮಾಜದಲ್ಲಿ ಎಲ್ಲರಂತೆ ಗೌರವಯುತ ಬದುಕು ನಡೆಸಬೇಕೆಂಬ ಉದ್ದೇಶದಿಂದ ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಂಡರೂ ಹಗಲಿರುಳೆನ್ನದೇ ಶ್ರಮಿಸಿದರು ಎಂದರು.
ಅವರ ತತ್ವ, ಸಿದ್ಧಾಂತಗಳು, ಆದರ್ಶಗಳು ನಮಗೆ ಮಾರ್ಗದರ್ಶನವಾಗಿದ್ದು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನಮಗೆ ದೊರಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘಟನಾ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಸಮಾಜದ ಪರವಾಗಿ ನಿಲ್ಲಲಾಗುವುದು ಎಂದು ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಸಮನ್ವಯ ಸಮಿತಿ ಕಾರ್ಯದರ್ಶಿ ರಾಮಪ್ಪ, ಖಜಾಂಚಿ ಮಹಾಲಿಂಗಪ್ಪ, ಉಪಾಧ್ಯಕ್ಷರಾದ ದಮ್ಮನಹಳ್ಳಿ ಕೃಷ್ಣಯ್ಯ, ದ್ಯಾವಯ್ಯ, ನಿರ್ದೇಶಕರಾದ ನವೀನ್, ಮಹಾದೇವ, ಚಂದ್ರು, ಅಶೋಕ್ ಕುಮಾರ್, ಡಿ.ಕೆ.ಕೃಷ್ಣಯ್ಯ, ದೊಡ್ಡಯ್ಯ, ವೆಂಕಟೇಶ್, ಅಮರನಾಥ್, ಶಿವಕುಮಾರ್, ಸೀತಾರಾಮ, ಶಿವಲಿಂಗಯ್ಯ, ಸಿದ್ದರಾಜ, ಮಹದೇವ ಸೇರಿದಂತೆ ಇನ್ನಿತರರು ಹಾಜರಿದ್ದರು.