ಹುಣಸೂರು: ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಹೋರಾಟ ಮತ್ತು ಸಂವಿಧಾನದ ಮೂಲಕ ಭದ್ರ ಬುನಾದಿಯನ್ನು ಹಾಕಿಕೊಟ್ಟವರು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಎಂದರೆ ಕೇವಲ ಅಸ್ಪಶ್ಯತೆಯ ವಿರುದ್ಧ ಹೋರಾಡಿದವರು, ದಮನಿತರಿಗೆ ದನಿಯಾದವರು ಮುಂತಾದ ಕೆಲವೇ ಕ್ಷೇತ್ರಗಳಲ್ಲಿ ಅವರನ್ನು ನೋಡುತ್ತಿದ್ದೇವೆ. ಆದರೆ, ಅಂಬೇಡ್ಕರ್ ವಿಶ್ವ ಕಂಡ ಅಗಾಧ ಪ್ರತಿಭೆ. ಅವರು ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಆರ್ಥಿಕ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಾಲ್ಯದಿಂದಲೇ ಹೋರಾಟದ ಜೀವನ ರೂಪಿಸಿಕೊಂಡ ಅವರು, ದೇಶದ ಏಳಿಗೆಗಾಗಿ ತಮ್ಮ ಸ್ವಹಿತಾಸಕ್ತಿಯನ್ನೇ ತೊರೆದರು. ವಿದ್ಯಾರ್ಜನೆಗೆ ಅವಕಾಶವೇ ಇಲ್ಲದ ಕಾಲದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲಂಬಿಯಾ ಯೂನಿವರ್ಸಿಟಿಗಳಲ್ಲಿ ಓದಿ ತನ್ನ ತಾಯಿನೆಲದ ಸೇವೆಗಾಗಿ ಮರಳಿ ಬಂದರು.
ದೇಶ ಆರ್ಥಿಕವಾಗಿ ಸದೃಢವಾಗಬೇಕು ಮತ್ತು ದೇಶದ ಸಂಪತ್ತು ಎಲ್ಲರಿಗೂ ಸಮನಾಗಿ ಸಿಗಬೇಕೆನ್ನುವುದೇ ಅವರ ಗುರಿಯಾಗಿತ್ತು. ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ ಮತ್ತು ಹೋರಾಟದಲ್ಲಿನ ನಂಬಿಕೆ ಅವರನ್ನು ವಿಶ್ವ ಮಾನವನ್ನಾಗಿ, ಶ್ರೇಷ್ಠ ಮಾನವತಾವಾದಿಯನ್ನಾಗಿ ಮಾರ್ಪಡಿಸಿತು. ಅಂಬೇಡ್ಕರ್‌ರನ್ನು ಒಂದು ಜಾತಿಯ ಸಂಕೋಲೆಯಲ್ಲಿ ಬಂಧಿಸಿಡುವುದನ್ನು ಬಿಟ್ಟು ಇಂದಿನ ಯುವಸಮೂಹ ಅವರ ಜೀವನಾದರ್ಶಗಳನ್ನು ಅರಿತು ಪಾಲಿಸಬೇಕೆಂದರು.
ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಮಾತನಾಡಿ, ದಮನಿತರಿಗೆ ಶಿಕ್ಷಣ ಮತ್ತು ರಾಜಕೀಯ ಶಕ್ತಿ ದೊರೆತಲ್ಲಿ ಮಾತ್ರ ಅಭಿವೃದ್ಧಿಪೂರಕ ಸಮಾಜ ಕಾಣಲು ಸಾಧ್ಯ ಮತ್ತು ಶಿಕ್ಷಣವೊಂದೇ ಹೋರಾಟದ ಆಯುಧವಾಗಿದೆ ಎಂದು ನಂಬಿದ್ದರು ಎಂದರು. ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಬದುಕಿಗಾಗಿ ತಿನ್ನಿರಿ ಮತ್ತು ಹೇಗೆ ಬದುಕಬೇಕೆಂಬುದನ್ನು ಅರಿಯಲು ಪುಸ್ತಕಗಳನ್ನು ಓದಿರಿ ಎಂದು ಸಂದೇಶ ನೀಡುವ ಮೂಲಕ ಯುವಜನರನ್ನು ಶಿಕ್ಷಣದತ್ತ ಸೆಳೆದಿದ್ದರು ಎಂದರು.
ಸಮಾರಂಭದಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನುಗಳಿಸಿದ ಎಚ್.ಪಿ.ತೇಜಸ್ವಿನಿ, ಎ.ಸಿ.ಜೀವನ್, ಎಂ.ಭೂಮಿಕಾ, ಬಿ.ಎಸ್.ಚಂದನಾ, ನಿಖಿಲ್ ಮತ್ತು ಪ್ರೀತಂನಾಯಕರನ್ನು ಸನ್ಮಾನಿಸಲಾಯಿತು. ನಗರಸಭಾಧ್ಯಕ್ಷ ಎಸ್.ಶರವಣ, ಮುಖಂಡರಾದ ಡಿ.ಕುಮಾರ್, ಬಸವಲಿಂಗಯ್ಯ, ದೇವರಾಜ ಒಡೆಯರ್, ಬಿಳಿಕೆರೆ ರಾಜು, ವರದರಾಜು, ಬಲ್ಲೇನಹಳ್ಳಿ ಕೆಂಪರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಪೌರಾಯುಕ್ತೆ ಕೆ.ಮಾನಸ, ಕಟ್ಟೆಮಳಲವಾಡಿ ದೇವರಾಜ್ ಸೇರಿದಂತೆ ದಲಿತ ಮುಖಂಡರು ಮತ್ತು ನಾಗರಿಕರು ಇದ್ದರು.