ಜಿಲ್ಲೆ

ಶೋಷಿತರಿಗೆಲ್ಲ ರಕ್ಷಣೆ ನೀಡಿದ ಸಂವಿಧಾನ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯ: ಸಂವಿಧಾನ ಕೇವಲ ದಲಿತರಿಗಷ್ಟೆ ಅಲ್ಲ, ಸಮಾಜದ ಎಲ್ಲ ಶೋಷಿತರಿಗೂ ರಕ್ಷಣೆ ನೀಡಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಾಗದೆ ಇಡೀ ವರ್ಷದ ಉತ್ಸವ ಆಗಬೇಕು. ಅಂತೆಯೇ ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಯೋಜನವನ್ನು ಇಡೀ ದೇಶದ ಸರ್ವ ಧರ್ಮದ ಸರ್ವ ಜನಾಂಗದ ಜನರು ಪಡೆದಿದ್ದಾರೆ. ಕೊಮ್ಮೇರಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ಅಡುಗೆಮನೆ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮದ ಸ್ಮಶಾನಕ್ಕೆ ಕಾನೂನು ತೊಡಕು ನಿವಾರಣೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗುವುದು. ಕೊಮ್ಮೇನಹಳ್ಳಿ ಗ್ರಾಮದಲ್ಲಿ 4.50 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮುಗಿದಿದ್ದು, ಉಳಿದ ರಸ್ತೆಗೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಕಲಾವತಿ ಮತ್ತು ಕೃಷ್ಣಮೂರ್ತಿ ಚಮರಂ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೀಲಾರ ರಾಧಾಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್, ವಕೀಲ ಕೆ.ಜಿ.ಮೋಹನ್, ದ್ವಾರಕ್, ಬಸವರಾಜು, ಶ್ರೀನಿವಾಸ್, ಅಶ್ವಿನಿ, ಜ್ಯೋತಿ, ಮಲ್ಲೇಶ್, ಶಂಕರೇಗೌಡ, ವೆಂಕಟೇಶ್ ಇತರರಿದ್ದರು.