ಮಂಡ್ಯ: ಸಂವಿಧಾನ ತಿರುಚುವ ಕೆಲಸಕ್ಕೆ ಮುಂದಾಗಿರುವ ಕೋಮುವಾದಿಗಳು ಜಾತಿ, ಜಾತಿಗಳ ನಡುವೆ ಗಲಭೆ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ನಾವೇ ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಸಮಾಜಘಾತುಕರ ಬಗ್ಗೆ ಎಚ್ಚರವಹಿಸಬೇಕೆಂದು ಶಾಸಕ ರವಿಕುಮಾರ್ ಗಣಿಗ ಎಚ್ಚರಿಸಿದರು.
ತಾಲೂಕಿನ ಕೆರಗೋಡು ಗ್ರಾಮದ 1ನೇ ಬ್ಲಾಕ್‌ನಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬರೆದ ಶ್ರೇಷ್ಟ ಸಂವಿಧಾನವನ್ನು ಕೋಮುವಾದಿಗಳು ಬದಲಾಯಿಸುವುದಕ್ಕಾಗಿ ಧರ್ಮ ಹಾಗೂ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಂತವರ ಬಗ್ಗೆ ಸಾರ್ವಜನಿಕರು ಹಾಗೂ ಯುವಕರು ಎಚ್ಚರ ವಹಿಸಬೇಕೆಂದು ತಿಳಿಸಿದರು.
ಅಂಬೇಡ್ಕರ್ ಅವರು ಎಲ್ಲ ಧರ್ಮಿಯರಿಗೆ ಅನ್ವಯವಾಗುವಂತೆ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಅವರಿಗೆ ಹಿಂದು, ಮುಸ್ಲಿಂ, ಸಿಖ್ಖ್, ಪಾರ್ಸಿ, ಜೈನ್, ಬೌದ್ಧ ಎನ್ನದೇ ಎಲ್ಲ ಧರ್ಮಿಯರು ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಜಯಂತಿ ಕೇವಲ ಏ.14ಕ್ಕೆ ಮಾತ್ರ ಸೀಮಿತವಾಗಬಾರದು. ವರ್ಷದ ಎಲ್ಲ ದಿನವು ಆಚರಣೆಯಾಗಬೇಕು. ಕೆರಗೋಡಿನ ಕಾಲನಿ ಅಭಿವೃದ್ಧಿ ಇದುವರೆಗೆ ಒಂದೂವರೆ ಕೋಟಿ ರೂ ವೆಚ್ಚ ಮಾಡಲಾಗಿದೆ. ಗ್ರಾಮದ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಗಿತವಾಗಿದ್ದು, ಅದರ ಮುಂದುವರಿದ ಕಾಮಗಾರಿಗೆ ಒಂದು ವರ್ಷದಲ್ಲಿ ಅಗತ್ಯ ಅನುದಾನ ಒದಗಿಸುತ್ತೇವೆ. ಅಲ್ಲದೇ ಪಂಚಲಿಂಗೇಶ್ವರ ದೇವಾಲಯದ ಅಭಿವೃದ್ದಿ 3 ವರ್ಷದಲ್ಲಿ 5 ಕೋಟಿ ರೂ ವೆಚ್ಚ ಮಾಡಿ, ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ನಾಯಕರಲ್ಲ, ಇಡೀ ವಿಶ್ವ ನಾಯಕರಾಗಿರುವ ಮಹಾನ್ ಮಾನವತವಾದಿ. ಪ್ರಪಂಚದ 70ಕ್ಕೂ ಹೆಚ್ಚು ರಾಷ್ಟ್ರದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ, ಪ್ರತಿಮೆಗಳಿವೆ ಎಂದರೆ ಅವರ ಚಿಂತನೆ, ಸಾಧನೆ, ಕೊಡುಗೆ ಏನೆಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ದೀಪಕ್ ಮುಖ್ಯ ಭಾಷಣ ಮಾಡಿದರು. ಮೈಷುಗರ್ ಎಂಡಿ ಮಂಗಲ್‌ದಾಸ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸೋಮಶೇಖರ್ ಕೆರಗೋಡು, ಮುದ್ದನಘಟ್ಟ ಮಹಾಲಿಂಗೇಗೌಡ, ಕೆ.ನಾಗೇಶ್, ಎಸ್.ಪಿ.ನಾಗರಾಜು ಇತರರಿದ್ದರು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಯಲ್ಲಿ ಭೀಮೋತ್ಸವದ ಮೆರವಣಿಗೆ ನಡೆಯಿತು. ಮೈಸೂರಿನ ಜಯಶಂಕರ್ ಮೇಸ್ತ್ರಿ ಮತ್ತು ಪದ್ಮಪಾಣಿ ಲಲಿತ ಕಲಾ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.