ಕುಶಾಲನಗರ: ದೇಶದ ಸುಭದ್ರಕ್ಕೆ ಭದ್ರ ಬುನಾದಿಯನ್ನು ಸಂವಿಧಾನದ ಮೂಲಕ ಹಾಕಿಕೊಟ್ಟ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎಸ್.ರಮೇಶ್ ಕರೆ ನೀಡಿದರು.
ಶಿರಂಗಾಲ ಗ್ರಾಪಂನ ನಲ್ಲೂರು ಗ್ರಾಮದ ಜೈ ಭೀಮ್ ಯುವಕ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರ ಮತ್ತು ಅವರು ಜೀವನದಲ್ಲಿ ಅನುಭವಿಸಿದ ಅಸ್ಪಶ್ಯತೆಯ ನೋವಿನ ಬಗ್ಗೆ ವಿವರಿಸಿದರು. ಅವರು ದಲಿತರ ಉದ್ಧಾರಕ್ಕಾಗಿ ಮಾಡಿದ ಹೋರಾಟಗಳನ್ನು ಸ್ಮರಿಸಿದರು.
ಕೊಡಗು ಜಿಲ್ಲೆಯ ಸಾಮರಸ್ಯ ವೇದಿಕೆ ಜಿಲ್ಲಾ ಸಂಯೋಜಕ ಹರೀಶ್ ತಿಮ್ಮಯ್ಯ ಮಾತನಾಡಿ, ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತ ಅಲ್ಲ. ಅವರೊಬ್ಬ ವಿಶ್ವ ನಾಯಕರು. ಎಲ್ಲ ಸಮುದಾಯಗಳ ಸಹಕಾರಗಳೊಂದಿಗೆ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಗ್ರಾಮದಲ್ಲಿ ಎಲ್ಲ ಸಮುದಾಯಗಳು ಪರಸ್ಪರ ಪ್ರೀತಿ, ಸಹಕಾರದಿಂದ ಬದುಕಬೇಕು. ನಾವು ಪರಿಶುದ್ಧ ಜೀವನ ಮಾಡುವುದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಕೊಡ್ಲಿಪೇಟೆಯ ದಲಿತ ಮುಖಂಡ ಕೆ.ವೆಂಕಟೇಶ್ವರ, ಭಾಜಪ ದಲಿತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ ಸಿದ್ದಲಿಂಗಪುರ, ಶಿರಂಗಾಲ ಪಂಚಾಯಿತಿ ಸದಸ್ಯೆ ಲಕ್ಷ್ಮೀ ವೆಂಕಟೇಶ್, ಜೈ ಭೀಮ್ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಗ್ರಾಮದ ಮುಖ್ಯಸ್ಥರು ಇದ್ದರು.