ಜಿಲ್ಲೆ

ಅಸಮಾನತೆ ಹೋಗಲಾಡಿಸಿದ ಮಹನೀಯರು: ಪ್ರೊ.ಶಿವಾನಂದ ಕೆಳಗಿನಮನಿ ಹೇಳಿಕೆ

ಸೌಮ್ಯ ಆರ್

ಉಳ್ಳಾಲ: ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ, ನ್ಯಾಯ ಮತ್ತು ಸಂಘಟನೆಗಳ ಮೂಲಕ ಅಸಮಾನತೆ ಹೋಗಲಾಡಿಸಿದರೆ, ಡಾ.ಬಾಬು ಜಗಜೀವನ್ ರಾಮ್ ರಾಜಕೀಯ, ಅಧಿಕಾರ ಬಳಸಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ಕೃಷಿ ಮಂತ್ರಿಯಾಗಿ ಭಾರತವನ್ನು ಆಹಾರ ಸ್ವಾವಲಂಬಿಯನ್ನಾಗಿ ಮಾಡಿದವರು. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಬದುಕನ್ನು ಸುಧಾರಿಸಿದವರು ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸಲು ಪ್ರಯತ್ನಿಸಿದ್ದರು. ಡಾ.ಬಾಬು ಜಗಜೀವನ್ ರಾಮ್ ತಮ್ಮ ತ್ಯಾಗ ಮತ್ತು ಪರಿಶ್ರಮದಿಂದ ದೇಶದ ಸಮಸ್ಯೆಗಳನ್ನು ಪರಿಹರಿಸಿದ ಮುತ್ಸದ್ದಿ ನಾಯಕ. ವಿದ್ಯಾರ್ಥಿಗಳು ಈ ಇಬ್ಬರು ಮಹಾನ್ ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಸ್ವಾಗತಿಸಿದರು. ಕುಲಸಚಿವ ಕೆ.ರಾಜು ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವಿಶೇಷಾಧಿಕಾರಿ ಡಾ.ಎನ್.ನರಸಿಂಹಯ್ಯ ವಂದಿಸಿದರು.