ಚಿಕ್ಕಮಗಳೂರು: ಸಮಾನತೆಯ ಹಾದಿಯನ್ನು ತೋರಿಸಿದ ಮತ್ತು ಸಹೋದರತ್ವದ ಗುರಿಯತ್ತ ನಮ್ಮನ್ನು ಮುನ್ನಡೆಸಿದ ಮಹಾನ್ ಶಕ್ತಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಎಂದು ಸಾಮಾಜಿಕ ಕಾರ್ಯಕರ್ತ ಸುಂದ್ರೇಶ್ ಹೊಯ್ಸಳಲು ಹೇಳಿದರು.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೊಬಳಿ ಹಂತೂರು ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಪ್ರತಿಪಾದಿಸಿದ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ‍್ಯದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಅಂಬೇಡ್ಕರ್ ದೇಶ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಪ್ರಮುಖರು. ಅವರ ಆದರ್ಶ, ತತ್ವ ಸಿದ್ದಾಂತಗಳು ನಮಗೆ ಸದಾ ಸ್ಪೂರ್ತಿದಾಯಕ ಎಂದು ಹೇಳಿದರು.
ಸರ್ವರಿಗೂ ಸಮಪಾಲು, ಸಮಬಾಳು ಧ್ಯೇಯದೊಂದಿಗೆ, ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ನೀಡಿದ ಮಹಾನ್ ಚೇತನ ವಿಶ್ವಜ್ಞಾನಿ ಭಾರತರತ್ನ ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ಎಂದು ಬಣ್ಣಿಸಿದರು.
ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಕೌಶಿಕ್ ಮಾತನಾಡಿ, ಸಮಾಜದ ಸಮಾನತೆಗೆ ಹೋರಾಡಿದ ಮಹಾನ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಆದರ್ಶಗಳು ಎಲ್ಲರೂ ಪಾಲಿಸ ಬೇಕು. ಇಂದಿನ ಯುವಪೀಳಿಗೆ ನಿರಂತರ ಅಧ್ಯಯನ ಮಾಡುವ ಮೂಲಕ ಅಂಬೇಡ್ಕರ್ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇದೇ ವೇಳೆ ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಗ್ರಾಮದಲ್ಲಿ ಸುತ್ತಮುತ್ತಲು ಸುಗ್ಗಿ ಕುಣಿತದೊಂದಿಗೆ ಮೆರವಣಿಗೆ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಪೂರ್ಣೆಶ್, ನಿಂಗರಾಜ್, ಸುರೇಶ್, ಪ್ರಸನ್ನ, ರಘು, ಪ್ರವೀಣ್, ಮಂಜುನಾಥ್, ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.