ಮಂಗಳೂರು: ದೇಶಕ್ಕೆ ಸುಭಧ್ರ ಸಂವಿದಾನವನ್ನು ನೀಡಿದ ವಿಶ್ವನಾಯಕ ಬಾಬಾಸಾಹೇಬರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸಿದೆ. ಅವರು ಇಹಲೋಕ ತ್ಯಜಿಸಿದ ನಂತರವೂ ಕಾಂಗ್ರೆಸ್ ತನ್ನ ಚಾಳಿಯನ್ನು ಬಿಟ್ಟಿಲ್ಲ. ಅಧಿನಿಂದ ಇಂದಿನವರೆಗೂ ಬಾಬಾಸಾಹೇಬರನ್ನು ಅವಮಾನಿಸುವುದನ್ನು ನಿರಂತರವಾಗಿ ಕಾಂಗ್ರೆಸ್ ಮುಂದುವರಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.
ಕರ್ನಾಟಕದ ಎಲ್ಲೆಡೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ವಿಚಾರ ಯಾತ್ರೆ ಅಂಗವಾಗಿ ದ.ಕ ಬಿಜೆಪಿ ಸಹಯೋಗದಲ್ಲಿ ಭುವನೇಂದ್ರ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ‘ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ ! ಬಾಬಾಸಾಹೇಬರು ಹೀಗೇಕೆ ಹೇಳಿದರು? ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಉತ್ತರಪ್ರದೇಶದ ಲಕ್ನೋದಲ್ಲಿ ನಡೆದ ಎಸ್‌ಸಿ ಫೆಡರೇಷನ್ ಸಭೆಯಲ್ಲಿ ಕ್ರಾಂತಿಸೂರ್ಯ ಡಾ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಮಾತನಾಡುತ್ತಾ ‘ಕಾಂಗ್ರೆಸ್ ಒಂದು ಸುಡುವ ಮನೆ, ದಲಿತರೇ ಕಾಂಗ್ರೆಸ್ ಪ್ರವೇಶಿಸ ಬೇಡಿ ಎಚ್ಚರ !’ ಎಂದು ಗುಡುಗಿದರು. ಆಗ ಬಾಬಾಸಾಹೇಬರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು, ಪ್ರಧಾನಮಂತ್ರಿ ಪಂಡಿತ್ ನೆಹರು ನೇತೃತ್ವದ ಭಾರತ ಸರ್ಕಾರದ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗಿದ್ದರು. ಇಂತಹ ಸ್ಥಾನದಲ್ಲಿ ಇದ್ದಾಗಲೇ ಬಾಬಾಸಾಹೇಬರು ಕಾಂಗ್ರೆಸ್ ಕುರಿತು ಹೀಗೆ ಹೇಳಿರುವುದು ಕಾಂಗ್ರೇಸ್‌ನ ಜನವಿರೋಧಿ ನೀತಿಯನ್ನು ಪ್ರತಿಬಿಂಬಿಸಿತ್ತು. ಬಾಬಾಸಾಹೇಬರಿಗೆ ಕಾಂಗ್ರೆಸ್ ಬಗ್ಗೆ ಆಕ್ರೋಶ ಹೆಚ್ಚಲು ಇದ್ದ ಕಾರಣಗಳೇನು ಎಂಬುದಕ್ಕೆ ಸುಧೀರ್ಘ ಇತಿಹಾಸವಿದೆ. 1947ರಲ್ಲಿ ಈ ದೇಶ ಸ್ವತಂತ್ರವಾಗಿತ್ತು. ಮಧ್ಯಂತರ ಸರ್ಕಾರದಲ್ಲಿ ಅಂಬೇಡ್ಕರ್ ಅವರು ಸಚಿವರೂ ಆಗಿದ್ದರು. ಇಂಥ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದು, ಇದು ಆತುರದ ಅಥವಾ ನಿರ್ಲಕ್ಷ್ಯದ ಹೇಳಿಕೆ ಅಲ್ಲ. ಇದು ಪ್ರಜ್ಞಾಪೂರ್ವಕ, ಚಿಂತನೆಯಿಂದ ನೀಡಿದ ಹೇಳಿಕೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. ಆದರೆ ಇಂತಹ ಮಹಾನ್ ನಾಯಕನನ್ನು ಕಾಂಗ್ರೆಸ್ ಹೀನಾಯವಾಗಿ ಕಂಡಿದ್ದು ದೇಶದ ಚರಿತ್ರಿಯ ಕಪ್ಪುಚುಕ್ಕೆ. ಇಂತಹ ವಿಚಾರಗಳನ್ನು ಸಮಾಜದ ಮುಂದಿಡುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ವಿಕಾಸ್ ಪುತ್ತೂರು ಸೇರಿದಂತೆ ಹಲವರು ಇದ್ದರು. ಜಗನಾಥ ಬೊಳಿಯೂರು ವಂದಿಸಿದರು.
---------------
ದೇಶದ ಮಹಾನ್ ನಾಯಕ ಅಂಬೇಡ್ಕರ ಅವರ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯವಾಡಿದೆ. ಇದಕ್ಕಿಂತ ಅವಮಾನ ದೇಶಕ್ಕೆ ಬೇರೊಂದಿಲ್ಲ. ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮತ್ತು ದಲಿತರಿಗೆ ನಿರಂತರವಾಗಿ ಮೋಸ ಮಾಡಿತ್ತು. ದಲಿತರನ್ನು ಅವತ್ತು ಮತಬ್ಯಾಂಕ್ ಆಗಿ ಬಳಸಿಕೊಂಡು, ಅದೇ ಚಾಳಿಯನ್ನು ಇವತ್ತಿಗೂ ಮುಂದುವರೆಸಿದೆ. ದಲಿತ ಸಮುದಾಯ ಮತ್ತು ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಕುರಿತು ಜಾಗೃತಿ ಮೂಡಿಸಲಿದ್ದೇವೆ.
-ಜಗದೀಶ್ ಹಿರೇಮನಿ,
ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ