ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿ ಆಚರಿಸಲಾಯಿತು. ಮಹಾದೇವ ಮುರಗಿ, ಋಷಿಕೇಶ ಸೋನಾವಣೆ, ರಿಷಿ ಆನಂದ ಮತ್ತಿತರರಿದ್ದಾರೆ. 
ಜಿಲ್ಲೆ

ಅಂಬೇಡ್ಕರ್​ ಆದರ್ಶ ಪಾಲಿಸಿ

ಗಿರೀಶ ಸಗರ

ವಿಜಯಪುರ: ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್​ ಅವರನ್ನು ನಾವೆಲ್ಲರೂ ನಿತ್ಯ ಸ್ಮರಿಸುವುದರ ಜತೆಗೆ ಅವರ ಸಂದೇಶ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಭಾನುವಾರ ನಡೆದ ಜಯಂತಿಯಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.

ಡಾ. ಅಂಬೇಡ್ಕರ್​ ಅವರು ಹಿಂದುಳಿದ ವರ್ಗ ಸೇರಿ ಬಡ ದೀನ ದಲಿತರ ಜೀವನ ಮಟ್ಟ ಸುಧಾರಿಸಲು ಶ್ರಮಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಕಲ್ಪಿಸಿ, ಮೂಲ ಸೌಲಭ್ಯಗಳೊಂದಿಗೆ ಸುಭದ್ರ ಜೀವನ ಕಟ್ಟಿಕೊಳ್ಳಬೇಕೆಂಬುದು ಆಶಯ ಹೊಂದಿದ್ದರು ಎಂದರು.

ಡಾ. ಬಿ.ಆರ್​. ಅಂಬೇಡ್ಕರ್​ ಅವರ ಆದರ್ಶಗಳು, ಸಂವಿಧಾನದ ಆಶಯಗಳ ಕುರಿತು ಪ್ರತಿಯೊಬ್ಬ ನಾಗರಿಕ ಕೂಡ ಅರಿವು ಹೊಂದಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆ& ಶಾಲೆಯಲ್ಲಿ ಅವರ ಆದರ್ಶ, ವಿಚಾರಗಳ ಕುರಿತು ಅರಿವು ಸಂವಿಧಾನ ಜಾಗೃತಿ ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಹಾನ್​ ನಾಯಕರ ಸ್ಮರಣೆ ಕೇವಲ ಜಯಂತಿಗೆ ಮಾತ್ರ ಸಿಮೀತವಾಗದೆ ಪ್ರತಿನಿತ್ಯ, ಪ್ರತಿಕ್ಷಣವೂ ಸ್ಮರಿಸುವಂತಹ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಜಿಪಂ ಸಿಇಒ ರಿಷಿ ಆನಂದ, ಎಸ್​ಪಿ ಋಷಿಕೇಶ ಸೋನಾವಣೆ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾಲಾರ್ಪಣೆ ನೆರವೇರಿಸಿ ಗೌರವ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಸೀಲ್ದಾರ್​ ಕವಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣನವರ, ಅಡಿವೆಪ್ಪ ಸಾಲಗಲ್​, ಫಯಾಜ ಕಲಾದಗಿ, ಆನಂದ ಔದಿ, ಎಂ.ಸಿ. ಮುಲ್ಲಾ, ರವಿ ಕಿತ್ತೂರ, ಅರುಣ ಗವಾರಿ, ಪ್ರಶಾಂತ ತೊರವಿ, ಚಂದ್ರಶೇಖರ ಚಕ್ರವರ್ತಿ, ಮಲ್ಲು ಬಿದರಿ ಮತ್ತಿತರರಿದ್ದರು.