ವಿಜಯಪುರ: ‘ಅನುಭವ ಮಂಟಪವೇ ಇರಲಿಲ್ಲ, ಶರಣರ ವಚನಗಳೆಲ್ಲವೂ ವೇದ ಮತ್ತು ಉಪನಿಷತ್ ಆಧಾರಿತ’ ಎಂದು ವೀಣಾ ಬನ್ನಂಜೆ ಎಂಬುವರು ತಲೆ ಹರಟೆ ಬರೆದಿದ್ದಾರೆ. ಶರಣರ ವಚನಗಳ ಮೇಲೆ ನಡೆಯುತ್ತಿರುವ ಇಂಥ ದಾಳಿ ಹತ್ತಿಕ್ಕಬೇಕಿದೆ ಎಂದು ಸಾಣೆಹಳ್ಳಿ ಪಂಡೀತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವ ಹಾಗೂ ಜಾಗೃತ ಕರ್ನಾಟಕ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ‘ಅಂಬೇಡ್ಕರ್ ಹಬ್ಬ’ ಆಚರಣೆಯ ಎರಡನೇ ದಿನವಾದ ಶನಿವಾರದಂದು ಅವರು ಆಶೀರ್ವಚನ ನೀಡಿದರು.
ಇದಕ್ಕೂ ಮೊದಲು ವಚನ ದರ್ಶನ ಕೃತಿ ಬಂತು. ಅದು ವಚನದ ದರ್ಶನ ಅಲ್ಲ ವಚನಗಳಿಗೆ ಅವಮಾನ ಮಾಡುವ ಕೃತಿ. ಇಂಥವುಗಳ ಬಗ್ಗೆ ಎಚ್ಚರ ವಹಿಸಬೇಕು. ಬಂಡಾಯ ಮನೋಭಾವ ಹೊಂದಬೇಕು ಎಂದ ಶ್ರೀಗಳು, ಬಸವಣ್ಣ ಕರ್ನಾಕಟದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ. 900 ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದವರು ಬಸವಣ್ಣ. ರಾಜ್ಯದಲ್ಲಿ ಈ ಹಿಂದೆ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ, ಅದರಲ್ಲೂ ಲಿಂಗಾಯತರೇ ಸಿಎಂ ಆಗಿದ್ದರೂ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರಲ್ಲದೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆ ಕಡ್ಡಾಯಗೊಳಿಸಿದರೆಂದು ಶ್ಲಾಘಿಸಿದರು.
ಬಸವಣ್ಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಅಲ್ಲಿನ ಕರ್ಮಟ ಖಂಡಿಸಿದರು. ಬಸವ ಕೇವಲ ಬೇಲಿ ನಿರ್ಮಿಸಲಿಲ್ಲ ಸೇತುವೆ ಕಟ್ಟುವ ಪ್ರಯತ್ನ ಮಾಡಿದರು. ಬಸವಣ್ಣನ ಸಂಸ್ಕೃತಿಯಲ್ಲಿ ಸಮಾಜ, ಅರ್ಥಶಾಸ್ತ್ರ, ಮನಃಶಾಸ್ತ್ರದ, ವೈಜ್ಞಾನಿಕ, ವೈಚಾರಿಕತೆ ಇದೆ. ಈ ಕಾರಣಕ್ಕಾಗಿಯೇ ಅವರು ಸಾಂಸ್ಕೃತಿಕ ನೇತಾರ ಆದರು. ದುರಂತ ಎಂದರೆ ಅವರ ತತ್ವಗಳನ್ನು ಮೈಗೂಡಿಸಿಕೊಳ್ಳುವಲ್ಲಿ ನಾವೆಲ್ಲ ವಿಫಲರಾಗುತ್ತಿದ್ದೇವೆ ಎಂದರು.
ನಾಡಿನಲ್ಲಿಂದು ದೀಪ ಹಚ್ಚುವ ಬದಲು ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ನಮ್ಮದು ಬೆಂಕಿ ಆರಿಸಿ ದೀಪ ಬೆಳಗಿಸುವ ಸಂಸ್ಕೃತಿ. ಬುದ್ಧ-ಬಸವ-ಅಂಬೇಡ್ಕರ್ ಅವರ ಮಾನವೀಯ ಕಳಕಳಿ, ಅಂತಃಕರಣ ಮೈಗೂಡಿಸಿಕೊಳ್ಳಬೇಕು. ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖ. ಆದರೆ ಇವರೆಡು ಕಲಬೆರಕಿ ಆಗಬಾರದು. ಧರ್ಮದ ತಳಹದಿಯ ಮೇಲೆ ರಾಜಕಾರಣ ನಡೆಯಬೇಕು. ಆದರೆ ಕಲಸು ಮೇಲೋಗರ ಆಗಬಾರದು ಎಂದರು.
ಧ್ಯಾನ, ಮೌನ, ಪ್ರಾರ್ಥನೆ ಜೊತೆಗೆ ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು. ಆ ಮೇಳ ಈ ಮೇಳ ಬಿಡಿ ಬಸವಣ್ಣನವರ ಸಪ್ತ ಶೀಲಗಳನ್ನು ಪಾಲಿಸಿ. ದಲಿತ, ಜಂಗಮರ ಮನೆಯಲ್ಲಿ ಹೋಮ ಹವನ ಇಂದಿಗೂ ನಡೆಯುತ್ತಿದೆ. ಮಂತ್ರಿಯಾಗಲು, ಮನೆ ಕಟ್ಟಿದರೆ ಹೋಮ ಹವನ ಮಾಡಿಸುತ್ತಾರೆ. ಇಂಥ ಹೋಮ ಹವನವನ್ನೇ ಬಸವಣ್ಣನವರು ನಿಂದಿಸಿದರು. ಅವರ ಮಾರ್ಗದಲ್ಲಿ ನಡೆಬೇಕೆಂದರು.
ಇಂದಿನ ರಾಜಕೀಯ ಎಷ್ಟರ ಮಟ್ಟಿಗೆ ಸುಧಾರಣೆ ಆಗಿದೆ ? ಎಂದು ಪ್ರಶ್ನಿಸಿದ ಶ್ರೀಗಳು, ಒಂದು ಕಾಲದಲ್ಲಿ ನಲ್ವತ್ತು ಪರ್ಸೆಂಟ್ ಸರ್ಕಾರ ಎಂದವರ ಸರ್ಕಾರದ ಸಚಿವರೇ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಎನ್ನುತ್ತಿದ್ದಾರೆ. ಭ್ರಷ್ಟತೆ ತುಂಬ ವಿಶಾಲವಾಗಿ ತನ್ನ ಬೇರು ಬಿಟ್ಟಿದೆ. ಪ್ರಾಮಾಣಿಕರು, ನೀತಿವಂತರನ್ನು ಯೋಗ್ಯರನ್ನು ಆಯ್ಕೆ ಮಾಡುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಅಧಿಕಾರ ಅವರಿಗೆ ಕೊಟ್ಟು ನಾವು ಭಿಕ್ಷುಕರಾಗುತ್ತಿದ್ದೇವೆ. ಬರೀ ರಾಜಕಾರಣಿಯನ್ನು ದೂರಿ ಅಗತ್ಯವಿಲ್ಲ. ಮತದಾರ ಪ್ರಾಮಾಣಿಕವಾಗಿರಬೇಕು. ಮತದಾರರು ಪ್ರಾಮಾಣಿಕರಾಗಿದ್ದರೆ ಕತ್ತು ಹಿಡಿದು ಪ್ರಶ್ನಿಸಬಹುದೆಂದರು.
ಬುದ್ದನಿಂದ ಆರಂಭಗೊಂಡ ಸಂಪ್ರದಾಯ ವಿರೋಧಿ ಹಾಗೂ ಮಾನವೀಯತೆಯ ಪ್ರತಿಪಾದನೆ ಬಸವಾದಿ ಶರಣರಿಂದ ಹಿಡಿದು ಅಂಬೇಡ್ಕರ್‌ವರೆಗೂ ಸಾಗಿ ಬಂತು. ಇದೇ ಸಂಪ್ರದಾಯವನ್ನು ಕನಕದಾಸರು, ಜ್ಯೋತಿಬಾ ಫುಲೆ ಕೂಡ ಮುಂದುವರಿಸಿದರು. ಬುದ್ದ, ಬಸವಣ್ಣ ಧರ್ಮದ ಆಧಾರದ ಮೇಲೆ ರಾಜಕೀಯ ತತ್ವ ನೀಡಿದರೆ ಅಂಬೇಡ್ಕರ್ ಅವರು ಸಂವಿಧಾನಿಕ ಭಾಷೆ ನೀಡಿದರು. ಸಮಾನತೆ ಸಂದೇಶ ಸಾರಿದರು. ಸಂವಿಧಾನಕ್ಕೆ ಬುದ್ದ ಹಾಗೂ ಬಸವಣ್ಣನವೇ ಸ್ಪೂರ್ತಿ ಎಂದರು.
ಬುದ್ದ ಬಸವ ಬಿತ್ತಿದ ಬೀಜ ಮರವಾಗಿ ಬೆಳೆದು ಸಂವಿಧಾನದ ರೂಪದಲ್ಲಿ ಸಿಕ್ಕಿದೆ. ದೇಶದಲ್ಲಿಂದು ಮನುವಾದ ಮತ್ತು ಮಾನವತಾ ವಾದ ಎಂಬ ಎರಡು ವಾದಗಳಿವೆ. ಮನುವಾದ ಶ್ರೇಣೀಕೃತ ವ್ಯವಸ್ಥೆ ಹಾಗೂ ಜಾತಿ ತಾರತಮ್ಯ ಸೃಷ್ಠಿಸಿದರೆ ಮಾನವತಾವಾದ ಸಮಾನ ಅವಕಾಶ ಕಲ್ಪಿಸಿತು. ಆದರೆ, ಮತ್ತದೇ ಮನುವಾದ ಜಾರಿಗೆ ತರುವ ಹುನ್ನಾರ ನಡೆದಿದೆ. ವಚನಗಳ ಹೆಸರಲ್ಲಿ ಬೆಳಕಿಗೆ ಬಂದವರೇ ಇಂದು ವಚನ ಸಾಹಿತ್ಯದ ಮೇಲೆ ದಾಳಿ ಶುರು ಮಾಡುತ್ತಿದ್ದಾರೆ. ವಚನ ದರ್ಶನ ಇದಕ್ಕೊಂದು ಉದಾಹರಣೆ ಎಂದರು.
ದೇಶದಲ್ಲಿಂದು ಸಂವಿಧಾನ ಬದಲಾವಣೆ ಹುನ್ನಾರ ಮಾತ್ರ ನಡೆಯುತ್ತಿಲ್ಲ. ಬಸವ, ಬುದ್ದನ, ಕುವೆಂಪು ತತ್ವ ಅಳಿಸುವ ಹುನ್ನಾರ ಕೂಡ ನಡೆದಿದೆ. ಮೇಲಿನವರು ಮೇಲಿನವರಾಗಿಯೇ ಕೆಳಗಿನವರು ಕೆಳಗಿನವರಾಗಿಯೇ ಉಳಿಯುವ ಹುನ್ನಾರ ನಡೆದಿದೆ ಎಂದರು.
ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಸಚಿವ ಕೃಷ್ಣ ಭೈರೇಗೌಡ ಅವರನ್ನು ದಲಿತ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳು ಪುಸ್ತಕ ನೀಡಿ ಸ್ವಾಗತಿಸಿಕೊಂಡರು.
ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಶ್ರೀನಾಥ ಪೂಜಾರಿ, ಇರ್ಫಾನ್ ಶೇಖ್, ಚಿದಾನಂದ ಚಲವಾದಿ, ಶರಣಯ್ಯ ಭಂಡಾರಿಮಠ, ವಿ.ಸಿ. ನಾಗಠಾಣ, ಜಂಬುನಾಥ ಕಂಚ್ಯಾಣಿ, ಪರ್ಜನ ಜಮಾದಾರ, ಪರಶುರಾಮ ಹೊಸಮನಿ ಮತ್ತಿತರರಿದ್ದರು.