ಜಿಲ್ಲೆ

ಸಮಾನ ಬದುಕು ಕಲ್ಪಿಸಿದ ಅಂಬೇಡ್ಕರ್

ಬಸವರಾಜ ವೀರಪ್ಪ ಗರಗ

ಹಳಿಯಾಳ: ಎಲ್ಲರಿಗೂ ಸಮಾನತೆ, ಸಮಾನ ಅವಕಾಶ ಹಾಗೂ ಸಮಾನ ಗೌರವದ ಬದುಕು ನೀಡಲು ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ದೇಶ ಕಂಡ ಮಹಾನ್ ಪುರುಷರಾಗಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಭಾಭವನದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ರಾಜ್ಯ ಮಟ್ಟದ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಲಿತ ಸಮುದಾಯದವರು ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೆ, ಯಾರೊಬ್ಬರೂ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.

ಮಾಜಿ ಉಪಪ್ರಧಾನಿ ಜಗಜೀವನರಾಮ್ ಅವರು ಹಸಿರು ಕ್ರಾಂತಿ ಮೂಲಕ ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡಿರುವ ಅವರನ್ನು ಸದಾ ಕಾಲ ಸ್ಮರಿಸುವ ಕೆಲಸವಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ದಲಿತ ಸಮುದಾಯ ಸೇರಿ ಪ್ರತಿಯೊಬ್ಬರೂ ಡಾ.ಅಂಬೇಡ್ಕರ್ ಅವರ ವಿಚಾರ ಮತ್ತು ಆದರ್ಶಗಳನ್ನು ಪಾಲಿಸಬೇಕಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷದ ವರಿಷ್ಠರು ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡಲು ಮುಂದಾಗಬೇಕು ಎಂದರು.

ಯಲ್ಲಾಪುರ ನಾಕಾದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಶ್ರೀ ಗುರುದೇವ ತಪೋವನ ಬಿರವಳ್ಳಿ ಮಠದ ಶ್ರೀ ಗುರುಮಾತಾ ನಂದಾತಾಯಿ ಅವರು ಸಾನ್ನಿಧ್ಯ ವಹಿಸಿದ್ದರು. ಲಕ್ಷ್ಮಣ ಬಕಾಯಿ ಅವರು ವಿಶೇಷ ಉಪನ್ಯಾಸ ನೀಡಿದರು.

ಭೀಮವಾದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬಿ.ಎನ್. ವೆಂಕಟೇಶ, ರಾಜ್ಯ ಸಂಘಟನಾ ಸಂಚಾಲಕ ಚಂದ್ರಕಾಂತ ಕಲಭಾವಿ, ಜಿಲ್ಲಾಧ್ಯಕ್ಷ ಈರಣ್ಣಾ ವಡ್ಡರ, ಜ್ಞಾನೇಶ್ವರ ಗಜಾಕೋಶ, ಜಿಲ್ಲಾ ಸಂಚಾಲಕ ಮಾರುತಿ ಭೋವಿವಡ್ಡರ, ಮಂಜುಳಾ ಮಾದರ, ಮಾಣಿಕ ಘಟಕಾಂಬಳೆ, ದಿವ್ಯಾ ಶೆಟ್ಟಾಳಕರ, ಪ್ರಸಾದ ಕಲಭಾವಿ, ಇತರರಿದ್ದರು.