ಜಿಲ್ಲೆ

ಅಂಬೇಡ್ಕರ್ ಜೋಡಿರಸ್ತೆ ನಾಮಫಲಕ ಅನಾವರಣ: ಪ್ರಗತಿಪರ ಸಂಘಟನೆಗಳಿಂದ ಅಳವಡಿಕೆ

ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜೋಡಿರಸ್ತೆಗೆ ನಾಮಫಲಕ ಅಳವಡಿಸಲು ಜಿಲ್ಲಾಡಳಿತ ಮತ್ತು ನಗರಸಭೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಾಮಫಲಕ ಅನಾವರಣ ಮಾಡಲಾಗಿದೆ.

ಜೋಡಿರಸ್ತೆಯ ಎರಡು ಕಡೆ ನಾಮಫಲಕ ಅನಾವರಣ ಮಾಡುವ ಮೂಲಕ ಜಿಲ್ಲಾಡಳಿತ ಹಾಗೂ ನಗರಸಭೆಗೆ ಸೆಡ್ಡು ಹೊಡೆಯಲಾಗಿದೆ. ಸ್ವಾಭಿಮಾನಿ ಸಮ ಸಮಾಜ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿ ಒಕ್ಕಲಿಗ, ಬುದ್ಧ ಭಾರತ ಫೌಂಡೇಷನ್‌ನ ಜೆ.ರಾಮಯ್ಯ, ಪರಿವರ್ತನಾ ಸಂಸ್ಥೆಯ ಟಿ.ಡಿ.ನಾಗರಾಜ್, ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ, ದಸಂಸ ಅಂದಾನಿ ಸೋಮನಹಳ್ಳಿ ಸೇರಿದಂತೆ ಹಲವರು ನಾಮಫಲಕ ಅನಾವರಣ ಮಾಡಿದರು.

1976ರಲ್ಲಿ ನಗರಸಭೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಬೆಸಗರಹಳ್ಳಿ ರಾಮಣ್ಣ ವೃತದವರೆಗೆ ಅಂಬೇಡ್ಕರ್ ಜೋಡಿರಸ್ತೆ ಎಂದು ನಾಮಕರಣ ಮಾಡುವ ನಿರ್ಣಯ ಮಾಡಿತ್ತು. ಅದರಂತೆ ರಸ್ತೆಯ ಎರಡು ಬದಿ ಅಂಬೇಡ್ಕರ್ ರಸ್ತೆ ನಾಮಫಲಕ ಅಳವಡಿಸಿದ್ದರು. ಸರ್ಕಾರಿ ದಾಖಲೆಯಲ್ಲಿಯೂ ಅಂಬೇಡ್ಕರ್ ರಸ್ತೆ ಎಂದು ನಮೂದಿಸಲಾಗುತ್ತಿತ್ತು. ಆದರೆ ಈ ರಸ್ತೆ ನೂರಡಿ ಅಗಲ ಇದ್ದಿದ್ದರಿಂದ ನೂರಡಿ ರಸ್ತೆ ಎಂದು ಪ್ರಚಲಿತಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಫಲಕ ಹಾಕಲು ಒತ್ತಡ ಹಾಕುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ ಹಿನ್ನೆಲೆಯಲ್ಲಿ ಸಂಘಟನೆಗಳಿಂದಲೇ ನಾಮಫಲಕ ಅಳವಡಿಸಲಾಗಿದೆ. ಶೀಘ್ರವೇ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ರಸ್ತೆಯುದ್ಧಕ್ಕೂ ನಾಮಫಲಕ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.