ಕೆಜಿಎಫ್- ಅಂಬೇಡ್ಕರ್ ಅವರ ಗೌರವವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಬೇಕೆಂಬ ಉದ್ದೇಶದಿಂದ ನನ್ನ ಕಾಯಾ, ವಾಚಾ, ಮನಸಾ ಅಧಿಕಾರವನ್ನು ಅವರ ಧ್ಯೇಯೋದ್ಧೇಶಗಳಿಗೆ, ಅವರು ನಡೆದಂತಹ ದಾರಿಗೆ ಸಮರ್ಪಣೆ ಮಾಡಿದ್ದೇನೆ ಎಂದು ಶಾಸಕಿ ರೂಪಕಲಾ ಹೇಳಿದರು.
ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಮಾತನಾಡಿದ ಅವರು, ಇಡೀ ದೇಶದ ಜನತೆಗೆ ಸಮಾನತೆ, ಭ್ರಾತೃತ್ವ ಮತ್ತು ಮೂಲ ಹಕ್ಕುಗಳನ್ನು ವರದಾನವನ್ನಾಗಿ ನೀಡಿದ ಮಹಾನ್ ಚೇತನ. ಅವರ ಪಾದ ಸ್ಪರ್ಶವಾದ ಈ ನೆಲವನ್ನು ಪವಿತ್ರವನ್ನಾಗಿ ನೋಡಿಕೊಳ್ಳುವುದು ನನ್ನ ಧರ್ಮವಾಗಿದ್ದು, ಅವರಿಗೆ ಕೀರ್ತಿ ತರುವ ಕೆಲಸ ಮಾಡುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಈಗಾಗಲೇ ಗುರುತಿಸಿರುವಂತಹ 8 ಎಕರೆ ಜಾಗದಲ್ಲಿ ಇಡೀ ಜಿಲ್ಲೆಯಲ್ಲಿಯೇ ಅಥವಾ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿ ಅಂಬೇಡ್ಕರ್ ಸ್ಮಾರಕ, ಆಡಿಟೋರಿಯಂ ನಿಮಾರ್ಣ ಮಾಡುವ ಕೆಲಸ ಮಾಡಲಾಗುವುದು. ಕೆಜಿಎಫ್ಗೆ ಅಂಬೇಡ್ಕರ್ ಬಂದಾಗ ಏನೇನು ದೂರದೃಷ್ಟಿಯನ್ನಿಟ್ಟುಕೊಂಡಿದ್ದರೋ, ಅವರ ಆಲೋಚನೆಗಳೇನಿತ್ತೋ, ಇಚ್ಛಾಶಕ್ತಿ ಏನಿತ್ತೋ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಸಾಕಾರಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಪಕ್ಷದ ಅತ್ಯಂತ ಕಿರಿಯ ಕಾರ್ಯಕರ್ತರಿಂದ ಹಿಡಿದು ನಾಯಕರೂ ಸಹ ಅಂಬೇಡ್ಕರ್ ನಡೆ, ನುಡಿಗಳನ್ನು ಮೈಗೂಡಿಸಿಕೊಂಡು ವಿಚಾರವಂತರಾಗಬೇಕೇ ಹೊರತೂ ಪ್ರಚಾರವಂತರಾಗಬಾರದು. ಧಮೋರ್ ರಕ್ಷತಿ ರಕ್ಷಿತ@ ಎಂಬಂತೆ ಧರ್ಮ ರಕ್ಷಣೆ ಮಾಡಿದಲ್ಲಿ ಧರ್ಮವೇ ನಮ್ಮನ್ನು ರಕ್ಷಿಸುವುದರಿಂದ ಎಲ್ಲರೂ ಧರ್ಮದ ದಾರಿಯಲ್ಲಿ ನಡೆಯೋಣ ಎಂದರು.
ಇಡೀ ರಾಜ್ಯಕ್ಕೆ 7 ಸಾವಿರ ಕೋಟಿ ರೂ. ಸಿಎಂ ವಿಶೇಷ ಅನುದಾನವಿದ್ದು, ಅದರ ಪೈಕಿ ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಂಬೇಡ್ಕರ್ ಸ್ಮಾರಕ, ಆಡಿಟೋರಿಯಂ, ದೇಶಕ್ಕೆ ಸೇವೆ ಮಾಡಿರುವ ಮಹನೀಯರ ಜೀವನ ಚಿತ್ರಣ ಬಿಂಬಿಸುವ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ಆ ಪಕ್ಷ, ಈ ಪಕ್ಷ ಎಂಬ ಬೇಧಭಾವವಿಲ್ಲದೇ ಇಡೀ ತಾಲೂಕಿನ ಎಲ್ಲರಿಗೂ ಅನ್ವಯಿಸುವಂತಹ ಉದ್ಯಾನವನ ನಿರ್ಮಿಸಲಾಗುವುದು ಎಂದರು.
ಅಂಬೇಡ್ಕರ್ ಕೇವಲ ಸಂವಿಧಾನ ರಚನೆ ಮಾಡಲಿಲ್ಲ, ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಗಳಲ್ಲಿ ದಿನದ 18 ಗಂಟೆ ಕಾಲ ದುಡಿಯುತ್ತಿದ್ದ ಕಾರ್ಮಿಕರು ದಿನದ 8 ಗಂಟೆಗಳ ಕಾಲ ಮಾತ್ರ ದುಡಿಯಬೇಕು ಎಂಬ ನಿಯಮ ಜಾರಿಗೆ ತಂದ ಮಹಾನ್ ಪುರುಷ. ಹಿಂದೆ ಮಹಿಳೆಯರಿಗೆ ಸಮಾನತೆ ದೊರಕದೇ ಅಸಮಾನತೆ ಆಚರಿಸುತ್ತಿದ್ದುದನ್ನು ಮನಗಂಡು ಸಂವಿಧಾನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ನೀಡಿದವರು ಅಂಬೇಡ್ಕರ್ ಆಗಿದ್ದಾರೆ ಎಂದರು.
ಪೌರಾಯುಕ್ತ ಪವನ್ಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಸಿಡಿಪಿಒ ರಾಜೇಶ್, ವೃತ್ತ ನಿರೀಕ್ಷಕ ನವೀನ್, ಬಿಇಒ ಅನಿತ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್ ಇದ್ದರು.