ಜಿಲ್ಲೆ

2 ವರ್ಷದೊಳಗೆ ಅಂಬೇಡ್ಕರ್ ಭವನ

ಎನ್.ವೆಂಕಟೇಶ್

ಕಾಮಗಾರಿ ಮೇಲ್ದರ್ಜೆಗೆ ₹9 ಕೋಟಿ ಬಿಡುಗಡೆ | ದಲಿತ ಮುಖಂಡರ ಸಭೆಯಲ್ಲಿ ಡಾ.ಎಂ.ಸಿ.ಸುಧಾಕರ್ ಮಾಹಿತಿ

ಚಿಂತಾಮಣಿ : ನಗರದ ಡಾ.ಅಂಬೇಡ್ಕರ್ ಭವನದ ಕಟ್ಟಡದ ಕಾಮಗಾರಿ ಮೇಲ್ದರ್ಜೆಗೇರಿಸಲು 9 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಂಗಳವಾರ ವಿವಿಧ ದಲಿತ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭವನದಲ್ಲಿ ಕಾಮಗಾರಿ ಕುರಿತಂತೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ನಗರದ ಹೃದಯ ಭಾಗವಾದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡಕ್ಕೆ 2015 ಏಪ್ರಿಲ್ 14ರರಂದು ಅಂದಿನ ಶಾಸಕರು ಮತ್ತು ಕೋಲಾರ ಸಂಸದರು ಭೂಮಿ ಪೂಜೆ ನೆರವೇರಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು.
ಆದರೆ, ಭೂಮಿ ಪೂಜೆ ನೆರವೇರಿಸಿದ ಆರು ತಿಂಗಳ ನಂತರ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಬಹುತೇಕ ಕಾಮಗಾರಿ ನೆನೆಗುದ್ದಿಗೆ ಬಿದ್ದಿತ್ತು. 2020 ಜೂ. 7ರಂದು ಅಂದಿನ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರೊಂದಿಗೆ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿದಾಗ ನಗರದ ಹಲವಾರು ದಲಿತ ಸಂಘಟನೆಗಳ ಮುಖಂಡರು ಸಚಿವರಿಗೆ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಗೆ ಚುರುಕು ಮುಟ್ಟಿಸುವಂತೆ ಕೋರಿದ್ದರು. ಅದಾಗಿ ವರ್ಷಗಳೇ ಕಳೆದರೂ ಕಾಮಗಾರಿ ಶೇ.60ಮಾತ್ರ ಮುಗಿದು, ಶೇ.40 ಬಾಕಿ ಉಳಿದಿತ್ತು.
ಚುನಾವಣೆಯ ಸಂದರ್ಭದಲ್ಲಿ ಅಂಬೇಡ್ಕರ್ ಭವನಕ್ಕೆ ತಾವು ರೂಪಿಸಿದ್ದ ನಕ್ಷೆ ಮತ್ತು ಅಂದಾಜು ಮೊತ್ತದ ಕಾಮಗಾರಿ ಬದಲಾವಣೆ ಮಾಡಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಡಾ.ಎಂ.ಸಿ.ಸುಧಾಕರ್ ಅವರು ತಾವು ಗೆದ್ದ ಮೇಲೆ ಅಪೂರ್ಣಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು.
ಭರವಸೆಯಂತೆ 2023 ಜೂನ್ 11 ನಗರದ ಹಳೇ ಸಿವಿಲ್ ಬಸ್ ನಿಲ್ದಾಣದಲ್ಲಿ ಕೈಗೊಂಡಿದ್ದ ಡಾ.ಅಂಬೇಡ್ಕರ್ ಭವನದ ಕಟ್ಟಡದ ಕಾಮಗಾರಿ ವೀಕ್ಷಿಸಿ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗಿರುವ ಕಾಮಗಾರಿ ಬಹುತೇಕ ಕಳಪೆ ಮತ್ತು ಕಲಾ ಭವನದ ಬದಲು ಕಲ್ಯಾಣ ಮಂಟದ ಮಾದರಿಯಲ್ಲಿ ಭವನ ನಿರ್ಮಾಣ ಮಾಡಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದ್ದರು.

ಮೊದಲು ಮಹಡಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ
ಇದೀಗ 9 ಕೋಟಿ ರೂಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿದ ಸಚಿವರು ನಗರದ ವಿವಿಧ ದಲಿತ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳ ಹಾಗೂ ಅಧಿಕಾರಿಗಳ ಸಭೆ ಕರೆದು ಅಂಬೇಡ್ಕರ್ ಭವನದ ಕಾಮಗಾರಿಯ ವಿಸ್ತರಣೆಯ ಬಗ್ಗೆ ಚರ್ಚಿಸಿ ವಿಡಿಯೋ ಮೂಲಕ ಭವನದ ಮುಂದಿನ ವಿಸ್ತ್ರತ ನಕ್ಷೆ ಸಹಿತ ವಿವರಿಸಿದರು. ಎರಡು ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳಿಸಲಾಗುವುದು. ಮೊದಲ ಮಹಡಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದ ಅವರು, ಬುಧವಾರದಿಂದಲೇ ಸ್ಥಗಿತಗೊಂಡ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ನಿಟ್ಟಾಲಿ, ಜಿಲ್ಲಾ ಸಮಾಜ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್, ಕೆಆರ್‌ಐಡಿಎಲ್ ಸಂಸ್ಥೆಯು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮೂಲ್ಯ, ನಗರದ ಖಾಸಗಿ ಇಂಜಿನಿಯರ್ ನಾರಾಯಣಸ್ವಾಮಿ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ತಹಸೀಲ್ದಾರ್ ಸುದರ್ಶನ್ ಯಾದವ್, ತಾಪಂ ಇಒ ಆನಂದ್ ಸೇರಿದಂತೆ ನಗರ ಮತ್ತು ತಾಲೂಕಿನ ಹಲವು ದಲಿತ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು, ನಗರಸಭೆ ಚುನಾಯಿತ ಪ್ರತಿನಿಧಿಗಳು ಇದ್ದರು.

.