ಗೌರಿಬಿದನೂರು : ಅಂಬೇಡ್ಕರ್ ಅಸಾಮಾನ್ಯ ವ್ಯಕ್ತಿಯಾಗಿದ್ದು, ಜ್ಞಾನದ ಮೂಲಕವೇ ವಿಶ್ವಮಾನ್ಯರಾದರು. ಅವರ ಹೋರಾಟದ ಬದುಕು, ಸಿದ್ಧಾಂತ, ಶಿಕ್ಷಣ ಪ್ರೀತಿ ಬಗ್ಗೆ ಎಲ್ಲರೂ ತಿಳಿಯಬೇಕು. ಅಂಬೇಡ್ಕರ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜ್ಞಾನದ ಸಂಪತ್ತನ್ನು ಹಾಗೂ ಅವರ ಹೋರಾಟ, ಸಂವಿಧಾನ ರಚನೆಯಿಂದ ದೊರಕಿರುವ ಮೀಸಲಾತಿ ಸೌಲಭ್ಯವನ್ನು ಪಡೆದಿರುವ ಎಲ್ಲರೂ ಇವರ ಜಯಂತಿಯನ್ನು ಆಚರಿಸುವ ಮೂಲಕ ಗೌರವಿಸಬೇಕು ಎಂದು ನಗರಸಭೆ ಸದಸ್ಯ ಸುಬ್ಬರಾಜು ತಿಳಿಸಿದರು.
ನಗರದ ಹಿರೇಬಿದನೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಈ ದೇಶದ ಜನರಿಗೆ ಸಂವಿಧಾನವನ್ನು ನೀಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ದೇಶ ಆಳುವುದನ್ನು ನೋಡಬೇಕು ಎಂದಿದ್ದರು. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ದೇಶ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು.
ದಲಿತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಶೋಷಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಅಂಬೇಡ್ಕರ್ ಈ ದೇಶದ ಸ್ವತ್ತು. ಇಂತಹ ಸಾಧಕ ವ್ಯಕ್ತಿಯ ಜೀವನ ಚರಿತ್ರೆಯನ್ನು ಅರಿಯಬೇಕು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದರು.
ನಗರಸಭೆ ಸದಸ್ಯೆ ಭಾಗ್ಯಮ್ಮ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡೋಣ ಎಂದರು.
ಗ್ರಾಮದ ದಲಿತ ಯುವಮಖಂಡರು ಮಹಿಳೆಯರು ಭಾಗವಹಿಸಿದ್ದರು.