ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಆರೂಡಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡದ ಸ್ಥಿತಿ 
ಜಿಲ್ಲೆ

ಆರೂಢಿ ಅಂಬೇಡ್ಕರ್ ಭವನ ಆದೋಗತಿ

ಅಕ್ರಮ ಚಟುವಟಿಕೆ ತಾಣವಾಗಿ ಬಳಕೆ

ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಅಕ್ರಮ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದು ಭೂತಬಂಗಲೆಯಂತಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಆರೂಡಿ ಪಂಚಾಯಿತಿಗೆ ಸೇರಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ವಹಣೆ ಇಲ್ಲದೆ ಸೊರಗಿದೆ. ಉದ್ಘಾಟನೆ ಭಾಗ್ಯವನ್ನು ಕಾಣದೆ ಲಕ್ಷಾಂತರ ರೂ. ವೆಚ್ಚ ಮಾಡಿದ ಕಟ್ಟಡ ಶಿಥಿಲಗೊಳ್ಳುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಜನರ ತೆರಿಗೆ ಹಣದ ಬಗ್ಗೆ ಎಷ್ಟು ಉಡಾೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಲ್ ಕಗ್ಗಂಟು:
ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ನಿರ್ಮಾಣದ ಬಳಿಕ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಲ್ಲಿ ಬಿಲ್ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ. ಕಟ್ಟಡ ನಿರ್ಮಾಣದ ಬಳಿಕ ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಉದ್ಘಾಟನೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಕಟ್ಟಡದಲ್ಲಿ ಇನ್ನು ಕೆಲವೊಂದು ಕೆಲಸಗಳು ಬಾಕಿ ಉಳಿದಿವೆ, ಸರಿಯಾಗಿ ಅನುದಾನ ನೀಡದೆ ಸತಾಯಿಸಿದ್ದರಿಂದ ಕಟ್ಟಡದ ಪರಿಸ್ಥಿತಿ ಹೀಗಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಒಡೆದ ಕಿಟಕಿ ಗಾಜುಗಳು:
ನೂತನ ಕಟ್ಟಡ ಉದ್ಘಾಟನೆಗೂ ಮುನ್ನವೇ ಹಳೇ ಕಟ್ಟಡದಂತೆ ಭಾಸವಾಗುತ್ತಿದೆ, ಕಟ್ಟಡಕ್ಕೆ ಬಳಿಕ ಬಣ್ಣ ಮಾಸಿ ಹೋಗಿದೆ, ಅಲ್ಲಲ್ಲಿ ಗೋಡೆಗಳು ಬಿರುಕುಬಿಟ್ಟುಕೊಂಡಿವೆ, ಮಳೆಗಾಲದಲ್ಲಿ ನೀರು ಸೋರುವ ಪರಿಸ್ಥಿತಿ ನಿರ್ಮಾಣವಾಗಿದೆ, ಕಟ್ಟಡಕ್ಕೆ ಅಂಟಿಕೊಂಡಂತೆ ನಿರ್ಮಿಸಿರುವ ಶೌಚಗೃಹಗಳ ಮೇಲ್ಛಾವಣಿ ಕಿತ್ತು ಬಂದಿವೆ, ಎಲ್ಲ ಕಡೆಗಳಲ್ಲಿ ಜೇಡರ ಬಲೆ ಕಟ್ಟಿಕೊಂಡಿದ್ದು ಭೂತಬಂಗಲೆಯಂತೆ ಭಾಸವಾಗುತ್ತಿದೆ. ಇನ್ನು ಕಿಟಕಿಗಳ ಗಾಜುಗಳು ಒಡೆದಿವೆ ಕೆಲವು ಕಡೆಗಳಲ್ಲಿ ಕಿಟಕಿಗಳೇ ಕಿತ್ತುಬಂದಿವೆ. ಮೇಲ್ಛಾವಣಿಯಲ್ಲಿ ಸಿಮೆಂಟ್ ಕಾಂಕ್ರಿಟ್ ಕಿತ್ತುಬಂದು ಕಬ್ಬಿಣದ ಕಂಬಿಗಳು ಹೊರಗೆ ಕಾಣುತ್ತಿವೆ. ಇವೆಲ್ಲವನ್ನು ಮತ್ತೆ ನವೀಕರಣ ಮಾಡಲು ಮತ್ತಷ್ಟು ಲಕ್ಷ ರೂ.ವಿನಿಯೋಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಅಕ್ರಮ ಚಟುವಟಿಕೆ ತಾಣ:
ತಲೆಗೂದಲು, ಏರ್‌ಪಿನ್ ಮಾರುವ ಜನರಿಗೆ ಅಂಬೇಡ್ಕರ್ ಭವನದ ಆವರಣದ ಆವಾಸ ಸ್ಥಾನವಾಗಿ ಬಳಕೆಯಾಗುತ್ತಿದೆ. ಅವರು ಭವನದ ಆವರಣದಲ್ಲೇ ಕಟ್ಟಿಗೆ ಹಾಕಿ ನೀರು ಕಾಯಿಸುವುದು, ಅಡುಗೆ ತಯಾರಿಸುವುದು ಮಾಡುತ್ತಿರುವುದರಿಂದ ಕಟ್ಟಡದ ಗೋಡೆಗಳಿಗೆ ಮಸಿ ಬಳೆದುಕೊಂಡಿದೆ. ಕಟ್ಟಡದ ಸುತ್ತಮುತ್ತಲ ಪ್ರದೇಶ ಬಯಲು ಶೌಚಗೃಹವಾಗಿ ಬಳಕೆಯಾಗುತ್ತಿದೆ. ಇದರ ಜತೆಗೆ ಮದ್ಯವ್ಯಸನಿಗಳ ತಾಣವಾಗಿಯೂ ಬಳಕೆಯಾಗುತ್ತಿದೆ ಸಂಜೆಯಾಗುತ್ತಲೇ ಮದ್ಯವ್ಯಸನಿಗಳು ಕಟ್ಟಡದ ಬಳಿ ಬೀಡು ಬಿಟ್ಟು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಜಾಲತಾಣಗಳಲ್ಲಿ ಆಕ್ರೋಶ:
ಆರೂಡಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಟ್ಟಡ ಅಧೋಗತಿಗೆ ತಲುಪಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟ್ಟಡದ ಪೋಟೋಗಳನ್ನು ಹಂಚಿಕೊಂಡು ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮಾಂತರ ಜಿಲ್ಲಾಡಳಿತದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಮೈ ಮರೆತ ಸಮಾಜ ಕಲ್ಯಾಣ ಇಲಾಖೆ:
ಗ್ರಾಮಾಂತರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ ಆದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನದಿಂದ ಹೊರಬಂದು ಇಲಾಖೆ ವ್ಯಾಪ್ತಿಯಲ್ಲಿನ ಸ್ಥಳಗಳಿಗೆ ಭೇಟಿ ನೀಡಬೇಕು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಆಗಾಗ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅಧಿಕಾರಿಗಳಿಗೆ ಆದೇಶ ಮಾಡುತ್ತಲೇ ಇರುತ್ತಾರೆ ಆದರೆ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಇದನ್ನು ಕಿವಿಮೇಲೆ ಹಾಕಿಕೊಳ್ಳುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಂಬೇಡ್ಕರ್ ಭವನದ ಬಗ್ಗೆ ಗಮನ ಸೆಳೆಯಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮಾ ಅವರಿಗೆ ಅನೇಕ ಬಾರಿ ‘ವಿಜಯವಾಣಿ’ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಕಟ್ಟಡ ನಿರ್ಮಾಣವಾದ ಬಳಿಕ ಕೆಲವು ಕಾರಣಗಳಿಂದ ಪಂಚಾಯಿತಿಗೆ ಹಸ್ತಾಂತರಿಸಿರಲಿಲ್ಲ, ಇದರಿಂದ ಭವನ ಕಾರ್ಯಾರಂಭವಾಗಿರಲಿಲ್ಲ. ಇದೀಗ ಗ್ರಾಮ ಪಂಚಾಯಿತಿಗೆ ಕಟ್ಟಡ ಹಸ್ತಾಂತರಿಸಲಾಗಿದೆ. ಕಟ್ಟಡದಲ್ಲಿ ಕೆಲವೊಂದು ಕೆಲಸಗಳು ಬಾಕಿ ಇವೆ, ಅವನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.

ಮಲ್ಲೇಶ್, ಪಿಡಿಒ ಆರೂಢಿ

ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಆರೂಡಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡದ ಸ್ಥಿತಿ ನೋಡಿದರೆ ನಿಜಕ್ಕೂ ವಿಷಾಧವಾಗುತ್ತದೆ. ಜನರಿಗಾಗಿ ಜನರ ತೆರಿಗೆ ಹಣದಿಂದ ನಿರ್ಮಾಣವಾದ ಕಟ್ಟಡದ ನಿರ್ವಹಣೆಗೆ ಏಕಿಷ್ಟು ನಿರ್ಲಕ್ಷ್ಯ ಎಂಬ ಬೇಸರ ಮೂಡುತ್ತದೆ. ಸಂಬಂಧಪಟ್ಟವರು ಈಗಲಾದರೂ ಎಚ್ಚೆತ್ತು ಭವನವನ್ನು ಸಾರ್ವಜನಿಕ ಸದ್ಭಳಕೆ ಅನುವು ಮಾಡಿಕೊಡಬೇಕು.

ಮಂಜುನಾಥ್, ಸಾಮಾಜಿಕ ಕಾರ್ಯಕರ್ತ