ಕುಂದಾಪುರ: ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಿದ ಸಂವಿಧಾನದಿಂದಲೇ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ದೂರದರ್ಶಿತ್ವ ಹೊಂದಿದ್ದ, ಪಾರದರ್ಶಕವಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಅಂಬೇಡ್ಕರ್ ಮಹಾನ್ ನಾಯಕ್, ಮಹಾಮಾನವತಾವಾದಿ ಹಾಗೂ ಪ್ರಾತ:ಸ್ಮರಣೀಯರು ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕುಂದಾಪುರ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೊವಾಡಿ ಮಾತನಾಡಿ, ಸಮಗ್ರ ಭಾರತದ ಚಿತ್ರಣವನ್ನೊಳಗೊಂಡ ಶ್ರೇಷ್ಠ ಚಾರಿತ್ರಿಕ ಪುರುಷ ಡಾ.ಅಂಬೇಡ್ಕರ್ ಅವರದ್ದು ಅಳತೆಗೆ ಮೀರದ ವ್ಯಕ್ತಿತ್ವ ಎಂದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕುಂದಾಪುರ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ ಶುಭಾಶಂಸನೆಗೈದರು.
ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರ್ಡೇಕರ್ ಎಸ್., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ವಿನಯ್ ಸ್ವಾಗತಿಸಿದರು. ಬಾಲಕಿಯರ ವಸತಿ ನಿಲಯ ಮೇಲ್ವಿಚಾರಕಿ ರಾಧಿಕಾ ರಾಣಿ ನಿರೂಪಿಸಿದರು.