ಪೊನ್ನಂಪೇಟೆ:
ಮಹಿಳಾ ಮೀಸಲಾತಿ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು, ವಿಧವಾ ವಿವಾಹ ಮೊದಲಾದವುಗಳನ್ನು ಸಂವಿಧಾನಾತ್ಮಕಗೊಳಿಸುವ ಮೂಲಕ ಮಹಿಳೆಯರ ಬಾಳಿಗೆ ಆಶಾಕಿರಣವಾದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಇಡೀ ಮಹಿಳಾ ಸಮುದಾಯ ಋಣಿಯಾಗಿರಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಹಿರಿಯ ಸಾಹಿತಿ ಡಾ.ಜೆ. ಸೋಮಣ್ಣ ಹೇಳಿದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಮೊದಲ ಕಾನೂನು ಸಚಿವರಾಗಿದ್ದ ಡಾ.ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದರು. ಆದರೆ ಅದು ತಿರಸ್ಕೃತಗೊಂಡಾಗ ಅದರಿಂದ ನೊಂದು ಸಚಿವ ಪದವಿಗೆ ರಾಜಿನಾಮೆ ನೀಡಿದರು ಎಂದು ಸ್ಮರಿಸಿದರಲ್ಲದೆ ಅಂಬೇಡ್ಕರ್ ಅವರು ಮಹಿಳೆ ಮತ್ತು ಪುರುಷರ ನಡುವೆ ಸಮಾನ ವೇತನ ಇರಬೇಕು ಎಂದು ಪ್ರತಿಪಾದಿಸಿದ ಮಹಾನ್ ಮಹಿಳಾವಾದಿಯಾಗಿದ್ದರು ಎಂದು ನುಡಿದರು.
ಕಾಲೇಜಿನ ವಿದ್ಯಾರ್ಥಿ ಸಂಪತ್ ಮಾತನಾಡಿ, ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡಿದರೂ ಎಂಬ ಆರೋಪಡಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸಲಾಯಿತು. ಅಸಾಮಾನ್ಯ ವ್ಯಕ್ತಿತ್ವದ ಡಾ.ಅಂಬೇಡ್ಕರ್ ಅವರು ಯಾವುದೇ ಭ್ರಮೆಯಲ್ಲಿ ಬದುಕಲಿಲ್ಲ. ಅವರೊಬ್ಬ ವಾಸ್ತವವಾಧಿಯಾಗಿದ್ದರು. ಶೋಷಿತರ ಬದುಕಿನ ಬವಣೆ ನೀಗಿಸಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ಶಿಕ್ಷಣದ ಮೂಲಕ ಅರಿವು ಪಡೆದುಕೊಂಡು ಛಲದಿಂದ ಬದುಕು ಸಾಗಿಸಬೇಕು ಎಂಬುದು ಅವರ ಆಶಯವಾಗಿತ್ತು. ಇದನ್ನು ಸಾಕಾರಗೊಳಿಸಲು ಬದುಕಿನುದ್ದಕ್ಕೂ ಹೋರಾಡಿದರು ಎಂದು ಹೇಳಿದರು.
ಮತ್ತೊಬ್ಬ ವಿದ್ಯಾರ್ಥಿ ಹರ್ಷಿತ್ ಮಾತನಾಡಿ, ಶೋಷಿತ ಜನಾಂಗದವರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ತಮ್ಮ ಕಡು ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ರಾಜಕೀಯಕ್ಕೆ ಯೋಗ್ಯರು ಬರಬೇಕು. ವಿಧಾನ ಸೌಧದಲ್ಲಿ ಪ್ರಾಮಾಣಿಕರು, ಯೋಗ್ಯರು ಕೂರಬೇಕು ಎಂಬುದನ್ನು ವಿಧಾನ ಸೌಧದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಯಲ್ಲಿನ ಕೈ ಬೆರಳು ಸೂಚ್ಯವಾಗಿ ತೋರಿಸುವಂತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಮಾತನಾಡಿ, ಸತತ ಓದಿನ ಮೂಲಕ ಬದುಕಿನ ಹೆದ್ದಾರಿ ಕಂಡುಕೊಂಡ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಹೋರಾಟದ ಮೂಲಕ ಸ್ವಾಭಿಮಾನದ ಬದುಕು ಸಾಗಿಸಿದ ಬಾಬು ಜಗಜೀವನ್ ರಾಮ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಕುರಿತು ಕಾಲೇಜಿನ ವಿದ್ಯಾರ್ಥಿನಿ ನವಿತಾ ಮಾತನಾಡಿದರು.
ಪ್ರಾಧ್ಯಾಪಕರಾದ ಪ್ರೊ.ಜಡೇಗೌಡ, ಪ್ರೊ. ದೇವಗಿರಿ, ಡಾ. ಕೆಂಚರೆಡ್ಡಿ, ಡಾ.ರಾಮಕೃಷ್ಣ ಹೆಗಡೆ, ಡಾ.ಹೊಸಗೌಡರ್ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.