ಜಿಲ್ಲೆ

ಅಂಬರೀಷ್ ಜನಸೇವೆ ಇಂದಿಗೂ ಪ್ರಸ್ತುತ: ಮಾಜಿ ಸಂಸದೆ ಸುಮಲತಾ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಹುಟ್ಟುವಾಗ ಏನೂ ತೆಗೆದುಕೊಂಡು ಬರಲ್ಲ. ಅದೇ ರೀತಿ ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಉಳಿದಿರುವ ಆಯಸ್ಸನ್ನು ಜನ ಸೇವೆಗಾಗಿ ಮುಡಿಪಾಗಿಡೋಣ ಎನ್ನುವ ದಿಕ್ಕಿನಲ್ಲಿ ನಿಮ್ಮ ಅಂಬರೀಷ್ ಸಾಗಿ ಹೋಗಿದ್ದಾರೆ. ಫೌಂಡೇಷನ್ ಸ್ಥಾಪಿಸಿಕೊಂಡು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಹೊರಟಿರುವ ಅಭಿಮಾನಕ್ಕೆ ಸದಾ ಋಣಿ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಶ್ಲಾಘಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಡಾ.ಎಂ.ಎಚ್.ಅಂಬರೀಷ್ ಫೌಂಡೇಷನ್ (ಸಮಾಜಮುಖಿ ಕೈಂಕರ್ಯಗಳ ವೇದಿಕೆ), ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ದಿವಂಗತ ಅಂಬರೀಷ್ ಅವರ 73ನೇ ಜಯಂತಿ, ಅಂಬರೀಷ್ ಸೇವಾ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಹಾಗೂ ಯುವ ವಿವೇಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಿನಿಮಾ ರಂಗದಲ್ಲಷ್ಟೇ ಅಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿ ಹೋಗಿರುವ ರೆಬಲ್‌ಸ್ಟಾರ್ ಅಂಬರೀಷ್ ಅವರ ಜನ ಸೇವೆಯು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪೋತ್ಸಾಹ ಸಿಗಬೇಕೆಂಬುವ ಹಂಬಲ ಅವರಲ್ಲಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕ್ರೀಡಾಂಗಣ ತರಬೇಕೆಂಬುದು ಅವರ ಇಂಗಿತವಾಗಿತ್ತು. ಈ ನಿಟ್ಟಿನಲ್ಲಿ ಮಂಡ್ಯ ಕ್ರೀಡಾಂಗಣವನ್ನು ಸುಸಜ್ಜಿತ ಕ್ರೀಡಾಂಗಣ ಮಾಡುವ ಯೋಜನೆ ಇತ್ತು. ಸಿನಿಮಾ ರಂಗದಲ್ಲಿದ್ದಾಗ ನಟನೆಗೆ ನ್ಯಾಯ ಕೊಟ್ಟ ಅವರು, ನಂತರ ರಾಜಕೀಯಕ್ಕೆ ಬಂದ ಮೇಲೆ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದರು ಎಂಬುದೇ ಸಂತಸವಾಗಿದೆ ಎಂದರು.

ಯಾವುದೇ ಗ್ರಾಮಕ್ಕೆ ಹೋದರೂ ಅಂಬರೀಷ್ ಅವರು ನೀಡಿರುವ ಅನುದಾನ ಇರಬಹುದು ಅಥವಾ ಸಮುದಾಯ ಭವನ, ದೇವಾಸ್ಥಾನಗಳು ಕೆಲಸಗಳನ್ನು ಈಗಲೂ ಜನರು ನೆನೆಯುತ್ತಾರೆ. ಅದನ್ನು ನೋಡಿ ನಾನು ಮಂಡ್ಯ ಜಿಲ್ಲೆಯ ಸೊಸೆ ಎನ್ನುವುದು ಹಾಗೂ ನನಗೂ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ಮರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ಶಂಕರಗೌಡ, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಪರಿಸರ ರೂರಲ್‌ನ ಮಂಗಲ ಯೋಗೀಶ್, ಕೆ.ಪಿ.ಅರುಣಕುಮಾರಿ, ಅಭಿಮಾನಿಗಳಾದ ಹರೀಶ್ ಬಾಣಸವಾಡಿ, ಕಾರ್ತಿಕ್‌ಗೌಡ ಕಾವೇರಿನಗರ, ಸತೀಶ್ ಹನಿಯಂಬಾಡಿ, ಮಹೇಶ್ ಚಿಂದಗಿರಿದೊಡ್ಡಿ, ಶ್ರೀನಿವಾಸ್, ಸಿದ್ದೇಗೌಡ ಭಾಗವಹಿಸಿದ್ದರು.

ಇದೇ ವೇಳೆ ಮಿಮ್ಸ್‌ನ ಸ್ತ್ರೀ ರೋಗ ತಜ್ಞ ಡಾ.ಆರ್.ಮನೋಹರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪೂಜಾ ಕುಣಿತ ಕಲಾವಿದೆ ಸವಿತಾ ಅವರಿಗೆ ಅಂಬರೀಷ್ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಧ್ರುತಿ, ಸಿ.ಪುನೀತಾ ಹಾಗೂ ದ್ವಿತೀಯ ಪಿಯುಸಿ ಹೆಚ್ಚು ಅಂಕ ಗಳಿಸಿದ ಹಿಮಾನಿ, ಸಂಜನಾಗೌಡ, ಸೌಮ್ಯಾ, ಹಂಸವೇಣಿ, ಮೋನಿಕಾ, ಮನೀಷ್‌ಗೌಡಗೆ ಪ್ರತಿಭಾ ಪುರಸ್ಕಾರ ಹಾಗೂ ಎಚ್.ಎಂ.ಶಶಾಂಕ್(ಎನ್‌ಸಿಸಿ), ಹರ್ಷಿತಾ ಎಂ.ಆನಂದ್(ಎನ್‌ಎಸ್‌ಎಸ್), ಎಂ.ಸಾತ್ವಿಕ್(ಸ್ಕೌಟ್ಸ್ ಆ್ಯಂಡ್ ಗೈಡ್ಸ್) ಅವರಿಗೆ ಯುವ ವಿವೇಕಾ ಪುರಸ್ಕಾರ ನೀಡಲಾಯಿತು.