ಉಡುಪಿ: ಬೇಸಿಗೆಕಾಲದಲ್ಲಿ ತೇಪೆ ಕಾಮಗಾರಿ ನಡೆಸುವ ಬದಲು ಜಡಿಮಳೆ ಸುರಿಯುತ್ತಿರುವಾಗ ಹೊಂಡಮುಚ್ಚಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಿನ್ನಿಮೂಲ್ಕಿಯಿಂದ ಕರಾವಳಿ ಜಂಕ್ಷನ್ ವರೆಗೆ ಎರಡೂ ಬದಿ ಸರ್ವಿಸ ರಸ್ತೆಯಲ್ಲಿ ವಾಹನಗಳು ಸಾಗುತ್ತಿವೆ. ಕಳೆದ 2 ತಿಂಗಳಿನಿಂದ ರಸ್ತೆ ಅಲ್ಲಲ್ಲಿ ಹದಗೆಟ್ಟಿದ್ದು, ತೇಪೆ ಕಾರ್ಯ ನಡೆಸುವಂತೆ ಒಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಮೇ ಅಂತ್ಯಕ್ಕೆ ಸುರಿದ ಭಾರೀ ಮಳೆಯಿಂದಾಗಿ ಸರ್ವಿಸ್ ರಸ್ತೆ ಮತ್ತಷ್ಟು ಹಾಳಾಗಿದ್ದು, ನಂತರ 10 ದಿನದಲ್ಲಿ ಬಿಸಿಲಿನ ವಾತಾವರಣವಿತ್ತು. ಈ ಸಂದರ್ಭದಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡದೆ ಗುರುವಾರ ಬಿಡುವಿಲ್ಲದೆ ಮಳೆಯಾಗುತ್ತಿರುವಾಗ ಹೊಂಡಗಳಿಗೆ ಜಲ್ಲಿಮಿಶ್ರಣ ಸುರಿಯುತ್ತಿದ್ದಾರೆ.
ಬೈಕ್ ಸವಾರರಿಗೆ ಸಂಕಷ್ಟ
ವಿಪರೀತ ಮಳೆ ಸುರಿದು ಹೊಂಡದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಈ ರಸ್ತೆಯಲ್ಲಿ ಬೈಕ್, ಸ್ಕೂಟಿಯಲ್ಲಿ ತೆರಳುವವರಿಗೆ ಹೊಂಡದ ಆಳ ಅರಿಯದೆ ಅನೇಕರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಈ ಸರ್ವೀಸ್ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ಇದೀಗ ಹೊಂಡದ ಜೊತೆಗೆ ಜೆಲ್ಲಿಕಲ್ಲು ಮಿಶ್ರದೊಂದಿಗೆ ಕೆಸರು ನೀರು ಸರ್ವೀಸ್ ರಸ್ತೆಯಲ್ಲೆಲ್ಲಾ ಹರಡಿಕೊಂಡಿರುವುದರಿಂದ ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಕಿನ್ನಿಮೂಲ್ಕಿ ಮೇಲ್ಸೆತುವೆಯಿಂದ ಕೆಳಕ್ಕೆ ಇಳಿವ ಜಾಗದಲ್ಲೇ ಜಲ್ಲಿ ಕಲ್ಲುಗಳು ರಸ್ತೆಯ ತುಂಬ ಹರಡಿಕೊಂಡಿದ್ದು, ಬೈಕ್ ಸವಾರರು ಜಾರಿ ಬೀಳುವ ಸಾಧ್ಯತೆಗಳು ಹೆಚ್ಚಿವೆ.