ಮೈಸೂರು: 2025ರ ವೇಳೆಗೆ 2 ಮಿಲಿಯನ್ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದು ಅಮೆಜಾನ್ ಇಂಡಿಯಾ ಸ್ಥಳೀಯ ಮುಖ್ಯಸ್ಥ ಅಭಿಷೇಕ್ ಜೈನ್ ತಿಳಿಸಿದರು.
ಶೇ.81ರಷ್ಟು ಜನ ಆನ್‌ಲೈನ್‌ನಲ್ಲಿ ವ್ಯವಹರಿಸಲು ಒಲವು ತೋರಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ಹೆಚ್ಚಾಗಿ ನಡೆಯುತ್ತಿರುವುದರಿಂದ 2025ರ ವೇಳೆ 10 ಮಿಲಿಯನ್ ಎಸ್‌ಎಂಇಗಳನ್ನು ಡಿಜಿಟಲೈಸ್ ಮಾಡುವ ಗುರಿ ಇದೆ. ಜತೆಗೆ ಈ ಅವಧಿಯಲ್ಲಿ 25 ಮಿಲಿಯನ್ ಡಾಲರ್ ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ಥಳೀಯ ಮಾರಾಟಗಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ಕಾರ್ಯಕ್ರಮದಿಂದಾಗಿ ಇಂದು ರಾಜ್ಯದ 15 ಸಾವಿರಕ್ಕೂ ಹೆಚ್ಚು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಹಾಗೂ ನೆರೆಹೊರೆಯ ಅಂಗಡಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಸ್ಥಳೀಯ ಅಂಗಡಿಗಳು ಕಾರ್ಯಕ್ರಮ ದೇಶದಾದ್ಯಂತ ಮಾರಾಟಗಾರರಿಗೆ ವ್ಯಾಪಾರ ವಿಸ್ತರಿಸಲು ಮತ್ತು ಉಳಿಸಿಕೊಳ್ಳಲು ನೆರವಾಗಿದೆ. ಇದು ಮಾರಾಟಗಾರರಿಗೆ ತಮ್ಮ ಸಮೀಪದ ಪ್ರದೇಶದ ಆಚೆಗಿನ ಗ್ರಾಹಕರನ್ನು ತಲುಪಲು ಅನುವು ಮಾಡಿಕೊಡುತ್ತದೆ. ಇದು ಮೈಸೂರಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಹಬ್ಬದ ಋತು ಆರಂಭವಾಗಿರುವುದರಿಂದ ಹೊಸ ಇ-ಕಾಮರ್ಸ್ ವ್ಯವಹಾರಗಳಿಗೆ ಬೆಂಬಲ ನೀಡಲು ಶೇ.50ರಷ್ಟು ಉಲ್ಲೇಖ ಶುಲ್ಕ ಮನ್ನಾ ಮಾಡಲಾಗುತ್ತದೆ. ಅಲ್ಲದೆ ನಮ್ಮ ಅಮೆಜಾನ್‌ಡಾಟ್.ಇನ್ ತಾಣದಲ್ಲಿ ಮಾರಾಟ ಮಾಡಲು ತಮ್ಮ ಸ್ನೇಹಿತರನ್ನು ಉಲ್ಲೇಖಿಸಲು ಶ್ರೇಷ್ಠ ಭಾರತ ಉಲ್ಲೇಖ ಕೊಡುಗೆ ಯೋಜನೆ ಪ್ರಕಟಿಸಲಾಗಿದ್ದು, 11,500 ರೂ ಮೌಲ್ಯದ ಪುರಸ್ಕಾರಗಳನ್ನು ಪಡೆಯಬಹುದು. ಇದು ಸೆ.28ರಿಂದ ಅ.27ರವರೆಗೆ ಇರಲಿದೆ ಎಂದು ಮಾತಿ ನೀಡಿದರು.
ಸ್ಥಳೀಯ ವ್ಯಾಪಾರಿಗಳ ಮಹತ್ವ ಸಂರಕ್ಷಿಸುವುದರ ಜತೆಗೆ ದೂರದ ಗ್ರಾಹಕರನ್ನು ವ್ಯಾಪಕವಾಗಿ ತಲುಪಲು ನಮ್ಮ ಸಂಸ್ಥೆ ಅನುವು ಮಾಡಿಕೊಡುತ್ತದೆ. ಮೈಸೂರು ಈ ಕ್ರಾಂತಿಯ ಮುಂಚೂಣಿಯಲ್ಲಿದೆ. ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಸ್ಥಳೀಯ ಉದ್ಯಮಿಗಳಿಗೆ ತಂತ್ರಜ್ಞಾನ ಹೇಗೆ ಶಕ್ತಿ ತುಂಬುತ್ತದೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.